ಬಡವರ ಜೀವಕ್ಕೆ ಬೆಲೆಯೇ ಇಲ್ಲವೇ?
ಕ.ಪ್ರ.ವಾರ್ತೆ ಮೈಸೂರು ಜ. 31
ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಮಾತು ಈ ಬಡಪಾಯಿಗಳಿಗೆ ಅಕ್ಷರಶಃ ಅನ್ವರ್ಥವಾಗಿದೆ. ಸುತ್ತೂರು ಜಾತ್ರೆ ನೋಡಿ ಹೋಗೋಣವೆಂದು ಆಗಮಿಸಿದ್ದ ಕೆಲವರಿಗೆ ಆನೆಯ ರಂಪಾಟ ತಂದ ಅನಾಹುತದಿಂದ ಬದುಕು ಮುಳುವಾಗಿದೆ.
ನಂಜನಗೂಡು ತಾಲೂಕಿನ ಸೋನಹಳ್ಳಿ ನಿವಾಸಿ ಮಾದಪ್ಪ. ಈತ ಅವರಿವರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವುದು ಕಾಯಕ. ಅದರಿಂದ ಬರುವ ಆದಾಯವೇ ಕುಟುಂಬ ನಿರ್ವಹಣೆಗೆ ಆಧಾರ. ಹೀಗಿರುವಾಗ ಜ. 29 ರಂದು ಸುತ್ತೂರಿನಲ್ಲಿ ನಡೆದ ಘಟನೆಯಲ್ಲಿ ಆನೆ ತುಳಿತಕ್ಕೆ ಒಳಗಾಗಿ ಎಡಗಾಲು ತೀವ್ರಗಾಯಗೊಂಡ ಕಾರಣ ಇಲ್ಲಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪತ್ನಿ ನೀಲಮ್ಮ ಹಾಗೂ 9 ಮತ್ತು 7 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳು ಸೇರಿದಂತೆ ನಾಲ್ಕು ಮಂದಿ ಸದಸ್ಯರ ಕುಟುಂಬ ಹೊಂದಿರುವ ಮಾದಪ್ಪ, ಕೂಲಿ ಮಾಡಿದರೆ ಮಾತ್ರ ಆ ದಿನ ಮನೆಯಲ್ಲಿ ಊಟ. ಇಲ್ಲದೇ ಹೋದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಹೀಗಿರುವಾಗ ಕಳೆದ ಮೂರು ದಿನಗಳಿಂದ ಕೂಲಿ ಇಲ್ಲದ ಕಾರಣ ಮನೆಯವರು ತುಂಬ ತೊಂದರೆ ಅನುಭವಿಸುವಂತಾಗಿದೆ.
ಪ್ರೀತಿ ಎಂಬ ಪುಟಾಣಿಗೆ: ಇನ್ನೂ 3 ವರ್ಷದ ಪ್ರೀತಿ ಅಜ್ಜ- ಅಜ್ಜಿಯ ಜತೆ ಜಾತ್ರೆ ನೋಡಲು ಬಂದು ಜನರ ತುಳಿತಕ್ಕೆ ಒಳಗಾಗಿ ಕಾಲಿಗೆ ಪೆಟ್ಟಾಯಿತು. ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ ಮಹೇಶ್ ತೀರಿಕೊಂಡು 2 ವರ್ಷಗಳಾಗಿವೆ. ಪ್ರೀತಿಯ ಜತೆಗೆ 3 ನೇ ತರಗತಿ ಓದುತ್ತಿರುವ ಮಮತಾ ಹಾಗೂ 2 ವರ್ಷದ ಕೈಗೂಸು ತೇಜು ಸೇರಿದಂತೆ ಮೂವರು ಮಕ್ಕಳ ಸಾಕುವ ಹೊಣೆ ತಾಯಿ ಮಹೇಶ್ವರಿಯದು. ಕೂಲಿ ಮಾಡುವುದೇ ಇವರ ಬದುಕಿನ ನಿರ್ವಹಣಗೆ ದಾರಿ. ಆದರೆ ಕಳೆದ ಮೂರು ದಿನಗಳಿಂದ ಆಸ್ಪತ್ರೆ ಸೇರಿರುವುದರಿಂದ ಆದಾಯವಿಲ್ಲದೆ ಬರಿಗೈಯಾಗಿ ಕುಟುಂಬ ಸಂಕಷ್ಟ ಎದುರಿಸುತ್ತಿದೆ.
ಮೂರು ದಿನವಾಯ್ತು: ಆಸ್ಪತ್ರೆಗೆ ದಾಖಲಾಗಿ ಮೂರು ದಿನ ಕಳೆಯುತ್ತಾ ಬಂದಿದ್ದರೂ, ಈವರೆಗೆ ಘಟನೆಗೆ ಕಾರಣರಾದ ಮಠದ ಯಾವೊಬ್ಬ ಮುಖ್ಯಸ್ಥರೂ ತಿರುಗಿ ನೋಡಿಲ್ಲ. ಇನ್ನೂ ನನ್ನ ಗ್ರಾಮದ ಅಥವಾ ನನ್ನ ಕ್ಷೇತ್ರದ ಮತದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಸಾಂತ್ವನ ಹೇಳಲು ಯಾವೊಬ್ಬ ಜನಪ್ರತಿನಿಧಿಯು ಆಸ್ಪತ್ರೆಗೆ ಭೇಟಿ ನೀಡಿಲ್ಲ. ಅಥವಾ ಅರಣ್ಯ ಇಲಾಖೆಯಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಇತ್ತ ತಿರುಗಿ ನೋಡದಿರುವುದು, ಬಡವರ ಜೀವಕ್ಕೆ ಬೆಲೆ ಇಲ್ಲವೇ ಎಂಬ ಸಂಶಯಕ್ಕೆ ಕಾರಣವಾಗಿದೆ.
ಇದೇ ಘಟನೆಯಲ್ಲಿ ಯಾವುದಾದರು ರಾಜಕೀಯ ನಾಯಕರೋ, ಅಧಿಕಾರಿಯೋ ಅಥವಾ ಮಠದ ಪ್ರಮುಖರೋ ಗಾಯಗೊಂಡಿದ್ದರೆ, ಇಲ್ಲವೇ ಅವರ ಕುಟುಂಬದವರೋ ಅಥವಾ ಮಕ್ಕಳೋ ಅವಘಡಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ ಯಾವ ರೀತಿ ಸ್ಪಂದನೆ ಸಿಗುತ್ತಿತ್ತು ಎಂಬುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಪ್ರೀತಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಗುಣಮುಖರಾಗಲು ಇನ್ನೂ 15 ದಿನಗಳು ಬೇಕು. ಅಷ್ಟರೊಳಗೆ ಅಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಮಾದಪ್ಪ ಕಾಲಿಗೆ ಚಿಕಿತ್ಸೆ ನೀಡಲಾಗಿದ್ದು ಅದು ಗುಣವಾಗಲು ಸುಮಾರು 1 ತಿಂಗಳು ಬೇಕಾಗುತ್ತದೆ. ಇಬ್ಬರಿಗೂ ಯಾವುದೇ ಅಪಾಯವಿಲ್ಲ. ಸಂಪೂರ್ಣ ಗುಣಮುಖರಾದ ನಂತರ ಸಹಜವಾಗಿ ನಡೆದಾಡಬಹುದು.
- ಡಾ. ಮೃತ್ಯುಂಜಯ,
ಮೂಳೆತಜ್ಞ, ಜೆಎಸ್ಎಸ್ ಆಸ್ಪತ್ರೆ
ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರೂ, ಪ್ರತಿದಿನ ಊಟ, ತಿಂಡಿ ಹಾಗೂ ಇತರೆ ಖರ್ಚಿಗಾಗಿ ಸಾಲ ಮಾಡುವಂತಾಗಿದೆ. ಊರಿನಲ್ಲಿರುವ ಮಕ್ಕಳನ್ನು ನೋಡಿ ಬರಲು ಪ್ರತಿದಿನ ಬಸ್ಗಾಗಿ ಜಾರ್ಜ್ ಇಲ್ಲದೆ ಬವಣೆ ಪಡುವಂತಾಗಿದೆ. ಯಜಮಾನರ ಕೂಲಿಯೇ ಜೀವನಕ್ಕೆ ಆಧಾರ.
- ನೀಲಮ್ಮ, ಮಾದಪ್ಪನ ಪತ್ನಿ
ಆಸ್ಪತ್ರೆಗೆ ಸೇರಿ ಮೂರು ದಿನವಾಯಿತು. ನಿಮ್ಮ ಕಷ್ಟವೇನು ಎಂದು ಕೇಳಲು ಮಠದವರಾಗಲಿ ಅಥವಾ ಯಾವುದೇ ಗಣ್ಯರಾಗಲಿ ಬಂದಿಲ್ಲ. ನಮ್ಮಂತಹ ಬಡವರಿಗೆ ಈ ಗತಿ ಬರಬಾರದು. ಪತಿ ತೀರಿಕೊಂಡ ಮೇಲೆ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದೇನೆ. ಈಗ ಮಗಳಿಗೆ ಈ ನೋವು ಆದಾದ್ದು ದಿಕ್ಕು ತೋಚದಂತಾಗಿದೆ.
- ಮಹೇಶ್ವರಿ, ಪ್ರೀತಿ ತಾಯಿ
ಮಾ. ವೆಂಕಟೇಶ್