ವಿಚಾರಣೆ ಮುನ್ನವೇ ಅನೇಕ ಪ್ರಕರಣ ಇತ್ಯರ್ಥ!
ಮೈಸೂರು: ಲೋಕಾಯುಕ್ತರ ಬಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಭಯ ಎಷ್ಟಿದೆ ಎಂಬುದು ಶುಕ್ರವಾರ ನಗರದ ಪೊಲೀಸ್ ಭವನದಲ್ಲಿ ನಡೆದ ಸಾರ್ವಜನಿಕರ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಸಭೆಯಲ್ಲಿ ಕಂಡುಬಂತು.
ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ. ಆಡಿ ನಡೆಸಿದ ಈ ಸಭೆಯಲ್ಲಿ ಬಹಳಷ್ಟು ಮಂದಿ ಅಧಿಕಾರಿಗಳು ಸಮಸ್ಯೆ ಇತ್ಯರ್ಥ ಪಡಿಸಿಕೊಂಡು ಬಂದಿದ್ದರು. ಸಾರ್ವಜನಿಕರಿಗೆ ಸಿಗಬೇಕಾದ ಸವಲತ್ತು ತಲುಪಿಸಿದ್ದರು. ತಮ್ಮ ಹೆಸರು ಹೇಳುತ್ತಿದ್ದಂತೆಯೇ ದೂರುದಾರರೊಂದಿಗೆ ಬರುತ್ತಿದ್ದ ಅಧಿಕಾರಿಗಳು ಈಗಾಗಲೇ ಈ ಸಮಸ್ಯೆ ಬಗೆಹರಿದಿದೆ ಎಂದು ಹೇಳಿ ತಮ್ಮ ಮೇಲಿದ್ದ ಆರೋಪದಿಂದ ಸಲೀಸಾಗಿ ಪಾರಾಗುತ್ತಿದ್ದರು. ಬೆಳಗ್ಗೆಯಿಂದ ಸಂಜೆವರೆಗೆ ನಡೆದ ವಿಚಾರಣೆ ವೇಳೆ ಆಡಿ ಅವರು, ಸಮಯಕ್ಕೆ ಹೆಚ್ಚು ಮಹತ್ವ ನೀಡಿದ್ದರಲ್ಲದೆ, ತಾಳ್ಮೆಯಿಂದ ದೂರುಗಳನ್ನು ಆಲಿಸಿದರು. ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿ ಮಾಹಿತಿ ಕಲೆ ಹಾಕುತ್ತಿದ್ದ ಅವರು, ತುರ್ತಾಗಿ ತೀರ್ಮಾನ ಕೈಗೊಳ್ಳುತ್ತಿದ್ದರು.
ಹೆಚ್ಚಾಗಿ ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ನಗರ ಪಾಲಿಕೆ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ಬಂದವು. ಜಿಲ್ಲಾಧಿಕಾರಿ ಸಿ. ಶಿಖಾ, ಲೋಕಾಯುಕ್ತ ಎಸ್ಪಿ ಜಗದೀಶ್ ಪ್ರಸಾದ್, ಜಿಪಂ ಸಿಇಒ ಪಿ.ಎ. ಗೋಪಾಲ್, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಇದ್ದರು.