ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸೆಲ್ಲಾರ್ ತೆರವಿಗೆ ನ್ಯಾ. ಬಿ. ಆಡಿ ಗಡುವು

Mainashree
Updated On : 31 Jan 2014, 8:57 am

ಕ.ಪ್ರ. ವಾರ್ತೆ, ಮೈಸೂರು, ಜ. 31
ಸೆಲ್ಲಾರ್‌ನಲ್ಲಿ ವಾಹನ ನಿಲ್ದಾಣಕ್ಕೆ ಅನುಮತಿ ಪಡೆದು ವಾಣಿಜ್ಯ ಚಟುವಟಿಕೆ ನಡೆಸುವವರ ವಿರುದ್ಧ ಮುಂದಿನ ಮೂರು ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಬಿ. ಆಡಿ ಅವರು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಪೊಲೀಸ್ ಭವನದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದಲ್ಲಿ ಶಾರದಾದೇವಿನಗರದ ಗೀತಾ ಎಂಬವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಮಾತನಾಡಿ, ನಗರದಲ್ಲಿ ವಾಹನ ನಿಲ್ದಾಣಕ್ಕೆ ಅನುಮಪತಿ ಪಡೆದು ಸೆಲ್ಲಾರ್‌ನಲ್ಲಿ ವಾಣಿಜ್ಯ, ಮತ್ತಿತರ ಚಟುವಟಿಕೆ ನಡೆಸುವವರಿಗೆ ಕೂಡಲೆ ನೋಟಿಸ್ ಜಾರಿಗೊಳಿಸಿ, ಬಳಿಕ ಕ್ರಮ ಕೈಗೊಳ್ಳಬೇಕು ಎಂದರು.
ಇಲವಾಲ ಹೋಬಳಿ ಆನಂದೂರಿನ ರವಿ ಎಂಬವರು ತಮ್ಮ ತಂದೆ ಗೃಹ ಮಂಡಳಿಗೆ 4.20 ಎಕರೆ ಜಮೀನನ್ನು ರು.1.6 ಕೋಟಿಗಳಿಗೆ ಮಾರಾಟ ಮಾಡಿದ್ದಾರೆ. ಇದು ನೋಂದಣಿ ಪತ್ರದಲ್ಲಿಯೂ ಉಲ್ಲೇಖವಾಗಿದೆ. ಆದರೆ ನಮ್ಮ ಖಾತೆಗೆ ಕೇವಲ ರು. 41.75 ಲಕ್ಷ ಮಾತ್ರ ಸಂದಾಯವಾಗಿದೆ. ಉಳಿಕೆ ಹಣ ಬಂದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಕೆಲವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು. ಈ ಕುರಿತು ಎಲ್ಲಾ ದಾಖಲಾತಿ ಪರಿಶೀಲಿಸಿದ ನ್ಯಾಯಮೂರ್ತಿಗಳು ಇಲವಾಲ ಪೊಲೀಸರನ್ನು ಕರೆದು, ಕೂಡಲೇ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಆದೇಶಿಸಿದರು.
 ಮಾಹಿತಿ ಆಧರಿಸಿ ಬಿ ರಿಪೋರ್ಟ್: ಸಿಎಸ್‌ಐ ಚರ್ಚ್ ಪ್ರತಿನಿಧಿಯೊಬ್ಬರು ನೀಡಿದ್ದ ಪ್ರಕರಣದ ವಿಚಾರಣೆ ನಡೆಸಿದ ಆಡಿ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ನಜರ್‌ಬಾದ್ ಪೊಲೀಸರು ಬಿ ರಿಪೋರ್ಟ್ ಹಾಕಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸಿಎಸ್‌ಐಗೆ ಸೇರಿದ ಚರ್ಚ್ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದವರ ಪರವಾಗಿಯೆ ಬಿ ರಿಪೋರ್ಟ್ ಹಾಕಿರುವುದು ಎಷ್ಟು ಸರಿ. ನೀವು ರಕ್ಷಣೆ ನೀಡುವುದು ಯಾರಿಗೆ. ಎಂಥ ಪೊಲೀಸ್ ಅಧಿಕಾರಿಗಳು ನೀವು ಎಂದು ಖಾರವಾಗಿ ಪ್ರಶ್ನಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ರಾಜಣ್ಣ ಮಧ್ಯಪ್ರವೇಶಿಸಿ ಚರ್ಚ್‌ನ ಬಿಷಪ್ ನೀಡಿದ ಲಿಖಿತ ಮಾಹಿತಿ ಆಧರಿಸಿ ಬಿ ರಿಪೋರ್ಟ್ ಹಾಕಲಾಗಿದೆ ಎಂದು ಸಮಜಾಯಿಷಿ ನೀಡಿದರು. ಬಳಿಕ ಆಡಿ ಅವರು ಮಧ್ಯಾಹ್ನ ಮೂರು ಗಂಟೆಗೆ ಬಿಷಪ್ ಅವರು ನೀಡಿದ ಲಿಖಿತ ಮಾಹಿತಿ ತರುವಂತೆ ಸೂಚಿಸಿದರು.
ಆನಂದೂರಿನ ರವೀಂದ್ರ ಎಂಬವರು ಕೆರೆ ಒತ್ತುವರಿ ಸಂಬಂಧ ನೀಡಿದ ದೂರಿನ ವಿಚಾರಣೆ ನಡೆಸಿದ ಆಡಿ ಅವರು, ಕೆರೆ ಒತ್ತುವರಿ ಆಗಿದ್ದರೂ, ಸ್ಥಳೀಯ ಅಧಿಕಾರಿಗಳಿಗೆ ಯಾವುದೆ ಮಾಹಿತಿ ಇಲ್ಲ. ಕೃಷಿಕರಿಂದ ಹಣ ಪಡೆದ ಆರೋಪವೂ ಅಧಿಕಾರಿಗಳ ಮೇಲಿದೆ. ಸರ್ಕಾರಿ ಆಸ್ತಿ ರಕ್ಷಿಸುವ ಆಸಕ್ತಿ ಅಧಿಕಾರಿಗಳಿಗೆ ಇಲ್ಲ. ಅದನ್ನು ಗ್ರಾಮಸ್ಥರು ಮಾಡಬೇಕೆ. ನಿಮ್ಮ ಕಣ್ಣ ಮುಂದೆಯೇ ಒತ್ತುವರಿ ನಡೆಯುತ್ತಿದ್ದರು ಏನು ಮಾಡುತ್ತಿದ್ದೀರಿ ಎಂದ ಅವರು, ಈ ಸಂಬಂಧ ಗ್ರಾಪಂ ಲೆಕ್ಕಿಗರು, ಪಿಡಿಒ ಮತ್ತು ಸರ್ವೇ ಅಧಿಕಾರಿಗಳಿಂದ ಮಾಹಿತಿ ಪಡೆದು ಹದಿನೈದು ದಿನಗಳಲ್ಲಿ ವರದಿ ನೀಡಬೇಕು ಎಂದು ತಹಸೀಲ್ದಾರ್ ನವೀನ್‌ಜೋಸೆಫ್ ಅವರಿಗೆ ತಾಕೀತು ಮಾಡಿದರು.
ನಂಜನಗೂಡಿನ ಮಹದೇವ, ಈ ಹಿಂದೆ ಡಿಡಿಪಿಐ ಆಗಿದ್ದ ನಾಗೇಂದ್ರ ಕುಮಾರ್ ಅವರು ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ಅಲ್ಲದೆ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅಕ್ಷರ ದಾಸೋಹ ಯೋಜನೆಯಡಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದರೂ ನಾಗೇಂದ್ರಕುಮಾರ್ ಸುಳ್ಳು ವರದಿ ನೀಡಿರುವುದಾಗಿ ಆರೋಪಿಸಿದರು.
ನಂಜನಗೂಡಿನ ತಾಯಮ್ಮ ನೀಡಿದ ದೂರಿನ ಸಂಬಂಧದ ವಿಚಾರಣೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಪ ಲೋಕಾಯುಕ್ತ ಆಡಿ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ವರದಿ ನೀಡಿದ ಡಾ. ಕುಮಾರ್ ಅವರಿಗೆ ಕೂಡಲೆ ಸಮನ್ಸ್ ನೀಡುವಂತೆ ಸೂಚಿಸಿದರು.
ಟಿ. ನರಸೀಪುರ ತಾಲೂಕಿನ ಗೋಪಾಲ, ಕಸಬ ಹೋಬಳಿಯಲ್ಲಿ ಲೆಕ್ಕಾಧಿಕಾರಿ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗೇಂದ್ರಪ್ಪ ಅವರು ಕಾರ್ಯ ಕ್ಷೇತ್ರದಲ್ಲಿ ವಾಸವಿರದೆ ಮೈಸೂರಿನಲ್ಲಿ ಇದ್ದಾರೆ ಎಂದು ನೀಡಿದ್ದ ದೂರಿನ ಕುರಿತು ವಿಚಾರಣೆ ನಡೆಸಿದ ಆಡಿ, ಕೂಡಲೆ ತಮ್ಮ ಕಾರ್ಯ ಕ್ಷೇತ್ರದಲ್ಲಿ ಮನೆ ಮಾಡಬೇಕು. ಆಗ ಮಾತ್ರ ನಿಮಗೆ ಅಲ್ಲಿನ ಸಮಸ್ಯೆ ಅರಿವಾಗುತ್ತದೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement