ಉಪ್ಪಾರ ಸಮಾಜಕ್ಕೆ ಪುಟ್ಟನಿಂಗಶೆಟ್ಟಿ ಅಧ್ಯಕ್ಷ
ನಂಜನಗೂಡು: ತಾಲೂಕು ಉಪ್ಪಾರ ಸಮಾಜದ ನೂತನ ಅಧ್ಯಕ್ಷರಾಗಿ ತೊರವಳ್ಳಿಮೋಳೆ ಗ್ರಾಮದ ಪುಟ್ಟನಿಂಗಶೆಟ್ಟಿ ಅವಿರೋಧ ಆಯ್ಕೆಯಾದರು. ಉಪ್ಪಾರ ಸಮಾಜದಲ್ಲಿ ಕಲ್ಯಾಣ ಮಂಟಪದಲ್ಲಿ ನಡೆದ ಗಡಿಕಟ್ಟೆ ಯಜಮಾನರು, ತಾಲೂಕಿನ ಯುವಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವಿರೋಧವಾಗಿ ಪುಟ್ಟನಿಂಗಶೆಟ್ಟಿರ ಆಯ್ಕೆಯನ್ನು ನಿರ್ಗಮಿತ ಅಧ್ಯಕ್ಷ ಕನಕನಗರದ ಮಹದೇವು ಘೋಷಿಸಿದರು. ಗೌರವ ಅಧ್ಯಕ್ಷರಾಗಿ ಅಣ್ಣಯ್ಯ ಶೆಟ್ಟಿ, ಉಪಾಧ್ಯಕ್ಷರಾಗಿ ಮಹದೇವಶೆಟ್ಟಿ, ಕಾರ್ಯದರ್ಶಿಯಾಗಿ ಗಣೇಶ್ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಮುದ್ದುಮಾದ ಶೆಟ್ಟಿ, ಖಜಾಂಚಿಯಾಗಿ ಎಂ.ರಾಜಣ್ಣ ಅವಿರೋಧ ಆಯ್ಕೆಯಾದರು.
ಹಾವು ಕಡಿತದಿಂದ ಮೃತಪಟ್ಟ ರೈತರಿಗೆ ಪರಿಹಾರ
ಕೆ.ಆರ್. ನಗರ: ಹಾವು ಕಡಿದು ಮೃತಪಟ್ಟ ರೈತ ಕುಟುಂಬಕ್ಕೆ ಕೃಷಿ ಇಲಾಖೆ ಮತ್ತು ಎಪಿಎಂಸಿ ವತಿಯಿಂದ ಪರಿಹಾರ ನೀಡುವುದಾಗಿ ಎಪಿಎಂಸಿ ನಿರ್ದೇಶಕ ಬಂಡಹಳ್ಳಿ ಕುಚೇಲ ಹೇಳಿದರು. ತಾಲೂಕಿನ ಬಂಡಹಳ್ಳಿ ಗ್ರಾಮದಲ್ಲಿ ಹಾವು ಕಡಿತದಿಂದ ಮೃತಪಟ್ಟ ಗೌರಮ್ಮನ ಕುಟುಂಬದ ಸದಸ್ಯರಿಗೆ ಕೃಷಿ ಇಲಾಖೆ ವತಿಯಿಂದ ನೀಡಿದ 1 ಲಕ್ಷ ಪರಿಹಾರದ ಚೆಕ್ ಅನ್ನು ವಿತರಿಸಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರಾದ ಸಾ.ರಾ.ಮಹೇಶ್ ಅವರು ಇಂತಹ ಕುಟುಂಬಗಳ ಮನೆ ಬಾಗಿಲಿಗೆ ಪರಿಹಾರದ ಚೆಕ್ ಕೊಡಿಸುವ ವ್ಯವಸ್ಥೆ ಕಲ್ಪಿಸಿದ್ದು ಇದು ಪ್ರಶಂಸನೀಯ ಎಂದರು. ಈ ವರ್ಷ ತಾಲೂಕಿನಲ್ಲಿ ಹಾವು ಕಡಿತದಿಂದ ಮೃತಪಟ್ಟ 10 ಕುಟುಂಬಗಳಿಗೆ ತಲಾ 1 ಲಕ್ಷ ಚೆಕ್ ವಿತರಿಸಿದ್ದು ಶಾಸಕ ಸಾ.ರಾ.ಮಹೇಶ್ ಮತ್ತು ಜಿಪಂ ಅಧ್ಯಕ್ಷ ಸಿ.ಜೆ.ದ್ವಾರಕೀಶ್ ಅವರಿಗೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಈ ಅನೂಕೂಲ ಕಲ್ಪಿಸಿದ್ದಕ್ಕಾಗಿ ಅಬಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ರುದ್ರೇಗೌಡ, ಸದಸ್ಯರಾದ ಜ್ಯೋತಿ ಸುರೇಶ್, ಮಾಜಿ ಸದಸ್ಯ ಕೋಳೂರು ರಮೇಶ್, ಎಸ್ಡಿಎಂಸಿ ಅಧ್ಯಕ್ಷ ರುದ್ರೇಗೌಡ, ಸದಸ್ಯ ರಾಮಕೃಷ್ಣ, ಅಣ್ಣೇಗೌಡ, ಸುರೇಶ್, ಶ್ರೀನಿವಾಸ ಇದ್ದರು.
ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಅಗತ್ಯ
ಕೆ.ಆರ್. ನಗರ: ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅಗತ್ಯ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪೆ ಮಹದೇವಸ್ವಾಮಿ ಹೇಳಿದರು. ಪಟ್ಟಣದ ಲೋಕಪ್ರಿಯ ಕಂಪ್ಯೂಟರ್ ಎಜುಕೇಶನ್ ಸೆಂಟರ್ನ ಬೇಸಿಗೆ ಶಿಬಿರದಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ನಗದು ಪುರಸ್ಕಾರ ನೀಡಿ ಮಾತನಾಡಿದರು. ವಿದ್ಯಾರ್ಥಿ ದಿಸೆಯಲ್ಲಿ ಎಲ್ಲರೂ ಕಂಪ್ಯೂಟರ್ ಶಿಕ್ಷಣ ಪಡೆದುಕೊಂಡು ಭವಿಷ್ಯದಲ್ಲಿ ಉದ್ಯೋಗ ಪಡೆಯುವಾಗ ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಸಂಸ್ಥೆ ವತಿಯಿಂದ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಬಿಪಿಎಲ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳಿಗೆ 3 ತಿಂಗಳು ಉಚಿತ ಕಂಪ್ಯೂಟರ್ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು. ಈ ವೇಳೆ ಪ್ರಥಮ ಬಹುಮಾನ ಪಡೆದ ಶ್ರೇಯಾಳಿಗೆ 2 ಸಾವಿರ, ದ್ವಿತೀಯ ಬಹುಮಾನ ಪಡೆದ ಎಲ್. ಸಹನಾ ಯಾದವ್ಗೆ 1,500 ಸಾವಿರ ಮತ್ತು ತೃತೀಯ ಬಹುಮಾನ ಪಡೆದ ದರ್ಶನ ಅವರಿಗೆ 100 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಶ್, ಮಾಲೀಕ ರಾಕೇಶ್ ಶೆಟ್ಟಿ, ಕಂಪ್ಯೂಟರ್ ಶಿಕ್ಷಕರಾದ ಜಯಮಾಲ, ಮಂಜುಳ, ದೀಪಿಕಾ, ರಾಜು ಇದ್ದರು.
ಪಪಂಗೆ ನಾಮ ನಿರ್ದೇಶನ
ಎಚ್.ಡಿ. ಕೋಟೆ: ಪಪಂಗೆ ಸರ್ಕಾರದ ನಾಮ ನಿದೇಶಿತ ಸದಸ್ಯರಾಗಿ ಲಕ್ಷ್ಮಣ್, ಮಂಜು ಮತ್ತು ಜ್ಞಾನೇಶ್ವರಿ ಬಾಯಿ ಅವರನ್ನು ನಾಮಕರಣ ಮಾಡಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಸಿದ್ದಿಕ್ ಪಾಷ ತಿಳಿಸಿದ್ದಾರೆ.
ರವೀಂದ್ರ ಹಂಗಾಮಿ ಅಧ್ಯಕ್ಷ
ನಂಜನಗೂಡು: ಇಲ್ಲಿನ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಕಪ್ಪಸೋಗೆ ರವೀಂದ್ರ ಹಂಗಾಮಿ ಅಧ್ಯಕ್ಷರಾಗಿ ಮಂಗಳವಾರ ತಾಪಂ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ತಾಪಂ ಆಡಳಿತ ಜೂ.30 ರಂದು 2ನೇ ಅವಧಿ ಮುಕ್ತಾಯದ ಹಿನ್ನೆಲೆ ಜು.4ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.