ಕಿತ್ತೂರು ಸುತ್ತಮುತ್ತ ವಿದ್ಯುತ್ ಕಿರಿಕಿರಿ
ಕಿತ್ತೂರು: ಪಿರಿಯಾಪಟ್ಟಣ ತಾಲೂಕಿನ ಪ್ರತಿಷ್ಠಿತ ಗ್ರಾಮಗಳಲ್ಲಿ ಒಂದಾದ ಕಿತ್ತೂರು ಗ್ರಾಮದ ಸುತ್ತಮುತ್ತ ಪ್ರತಿನಿತ್ಯ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲು ಸೆಸ್ಕ್ ವಿಫಲವಾಗಿದ್ದು, ರಾತ್ರಿ ವೇಳೆಯಂತೂ ಸಂಪೂರ್ಣ ವಿದ್ಯುತ್ ಇಲ್ಲದೆ ವಿದ್ಯುತ್‌ನ್ನು ಹೆಚ್ಚು ಅವಲಂಬಿತವಾಗಿರುವ ರೈತರು, ವಿದ್ಯಾರ್ಥಿಗಳು ಮತ್ತು ಗುಡಿಕೈಗಾರಿಕೆ ಉದ್ಯಮಿಗಳು ಪರದಾಡುವಂತಾಗಿದೆ.
ನಿತ್ಯ ಹಗಲಿನಲ್ಲಿ ಕೊಡುವ 4 ಗಂಟೆ ತ್ರಿಫೇಸ್ ವಿದ್ಯುತ್ ಅನ್ನು ಅನಿಯಮಿತವಾಗಿ ತೆಗೆಯುತ್ತಿದ್ದು, ಸರಿಯಾದ ಸಮಯ ತಿಳಿಸದ ಸೆಸ್ಕ್‌ನವರು ತಮಗಿಷ್ಟ ಬಂದ ರೀತಿಯಲ್ಲಿ ವರ್ತಿಸುತ್ತಿದ್ದು, ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತಿರುವುದರಿಂದ ಗ್ರಾಮದ ವ್ಯಾಪ್ತಿಯಲ್ಲಿರುವ ವಿದ್ಯುತ್ ಅವಲಂಬಿತ ಉದ್ಯಮಗಳು ನಿಂತು ಹೋಗಿದ್ದು, ಮನೆಗಳಲ್ಲಿರುವ ಗೃಹೋಪಯೋಗಿ ವಸ್ತುಗಳು ಉಪಯೋಗಕ್ಕೆ ಬಾರದಂತಾಗಿದ್ದು, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚುವಂತೆ ಮಾಡಿದೆ.
ಬರದ ಛಾಯೆ ಆವರಿಸಿದ್ದು, ಸರಿಯಾಗಿ ಮಳೆ ಬಾರದ ಹಿನ್ನೆಲೆ ಇದೀಗ ಬೆಳೆಯಲಾಗಿರುವ ಕಬ್ಬು, ತಂಬಾಕು, ಬಾಳೆ, ಅರಿಶಿಣ, ಕಲ್ಲಂಗಡಿ ಸೇರಿದಂತೆ ಇನ್ನಿತರ ಬೆಳೆಗಳಿಗೆ ಪಂಪ್‌ಸೆಟ್ ಮೂಲಕವಾದರೂ ನೀರು ಹರಿಸಲು ರೈತರು ಪರದಾಡುವಂತಾಗಿದೆ.
ಜಮೀನುಗಳಲ್ಲಿಯೇ ಇದ್ದು, ವಿದ್ಯುತ್ ಬರುವುದನ್ನೇ ಜಾತಕ ಪಕ್ಷಿಗಳಂತೆ ಕಾದು ಕುಳಿತು ನೀರು ಹಾಯಿಸಬೇಕಾಗಿದ್ದು, ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅಸಮರ್ಪಕ ಉತ್ತರ ನೀಡುತ್ತಿದ್ದು, ಕಿತ್ತೂರಿನಲ್ಲಿರುವ ಸೆಸ್ಕ್ ಕಚೇರಿಯಲ್ಲಿ ಈ ಬಗ್ಗೆ ಪ್ರಶ್ನಿಸಲು ಸಾರ್ವಜನಿಕರು ತೆರಳಿದರೆ ಅಲ್ಲಿ ಸಿಬ್ಬಂದೀ ಇರುವುದೇ ಇಲ್ಲ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಇನ್ನು ವಾರದೊಳಗೆ ಸಮರ್ಪಕ ವಿದ್ಯುತ್ ನೀಡಲು ಮುಂದಾಗದಿದ್ದರೆ ಸಾರ್ವಜನಿಕರು, ರೈತರು ಮತ್ತು ವಿದ್ಯಾರ್ಥಿಗಳ ಜೊತೆಗೂಡಿ ಹೊಸೂರು ಸೆಸ್ಕ್ ಕಚೇರಿ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.