ಗುರುಭವನ ನಿರ್ಮಾಣಕ್ಕೆ ಯತ್ನ: ಬಿಇಒ
ಪಿರಿಯಾಪಟ್ಟಣ: ಪಟ್ಟಣದಲ್ಲಿ ಗುರುಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಿಇಒ ಆರ್. ಕರೀಗೌಡ ಹೇಳಿದರು. ಪಟ್ಟಣದ ಶಿಕ್ಷಕರ ಸಭಾಂಗಣದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಪಟ್ಟಣದಲ್ಲಿ ಗುರುಭವನ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಶಾಸಕರ ಹಾಗೂ ಶಿಕ್ಷಕರ ಸಹಕಾರದೊಂದಿಗೆ ಗುರುಭವನ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಬಿ.ಬಸವರಾಜ್ ಮಾತನಾಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ರಾಜಕುಮಾರ್ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ರಿಯಾಜ್ ಅಹಮದ್, ಬಿ.ಎಸ್. ದಯಾನಂದ್, ಸೋಮಶೇಖರ್, ನಟರಾಜ ನಾಯಕ, ಎಂ.ಪಿ.ನಾಗರಾಜ್, ಎಸ್.ಪಿ. ವೃಷಭೇಂದ್ರಪ್ಪ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸಣ್ಣಸ್ವಾಮಿಗೌಡ, ಶಿವಪ್ರಕಾಶ್, ವೀಣಾ, ಮಂಜುಳಾ ಇದ್ದರು.