ಹಸಿವಿನಿಂದ ಯಾರೂ ಬಳಲದಿರಲಿ
ಪಿರಿಯಾಪಟ್ಟಣ: ವಿಶ್ವದಲ್ಲಿ ಯಾರೂ ಹಸಿವಿನಿಂದ ನರಳಬಾರದು ಎಂಬ ಧ್ಯೇಯೋದ್ದೇಶದಿಂದ ಸಂಸ್ಥೆ ವತಿಯಿಂದ ವಿಶ್ವದಾದ್ಯಂತ ವಿಶ್ವ ಅನ್ನಪೂರ್ಣ ದಿನಾಚರಣೆ ಆಯೋಜಿಸಿರುವುದಾಗಿ ರೋಟರಿ ಸಂಸ್ಥೆ ತಾಲೂಕು ಅಧ್ಯಕ್ಷ ಸತೀಶ್ ಕುಮಾರ್ ಹೇಳಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿ ರೋಟರಿ ಸಂಸ್ಥೆ ಏರ್ಪಡಿಸಿದ್ದ ಅನ್ನ ಸಂತರ್ಪಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವದಲ್ಲಿ ಅದರಲ್ಲೂ ದೇಶದಲ್ಲಿ ಅನೇಕರು ಹಸಿವಿನಿಂದ ನರಳುತ್ತಿದ್ದಾರೆ. ಹಸಿವು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ಕೂಡ ಸಾಂಕೇತಿಕವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿಯೊಬ್ಬರೂ ಕೈಜೋಡಿಸುವಂತೆ ತಿಳಿಸಿದರು. ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಬಿ.ವಿ.ಜವರೇಗೌಡ, ನಾಗರಾಜ್, ಚಂದ್ರು, ಸಿ.ಎನ್. ವಿಜಯ್, ಪುರುಷೋತ್ತಮ್, ಕೆ.ಬಿ.ರವಿಶಂಕರ್, ಮೋಹನ್, ವಿನಯ್‌ಶೇಖರ್, ವಕೀಲರ ಸಂಘದ ಕಾರ್ಯದರ್ಶಿ ಹರೀಶ್ ಇದ್ದರು.