ಗ್ರಂಥಗಳು ಓದುಗರನ್ನು ತಲುಪಲಿ
ಕ.ಪ್ರ. ವಾರ್ತೆ ನಂಜನಗೂಡು ಜು.2
ಗ್ರಂಥಗಳು ಕೇವಲ ಗ್ರಂಥಾಲಯದಲ್ಲಷ್ಟೇ ಇದ್ದರೆ ಸಾಲದು. ಅವು ಓದುಗರ ಮನೆ-ಮನಗಳನ್ನು ತಲುಪುವಂತಾಗಬೇಕು ಎಂದು ವಿಜಾಪುರದ ಜ್ಞಾನಯೋಗಾಶ್ರವುದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಪ್ರಿಯದರ್ಶಿನಿ ಪ್ರಕಾಶನ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಸಹಯೋಗದೊಂದಿಗೆ ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಏರ್ಪಡಿಸಿದ್ದ ವೀರಶೈವ ಸಾಹಿತ್ಯ ಚರಿತ್ರೆಯ ಸಂಪುಟ 3 ಭಾಗ 1-2 ಕೃತಿಗಳ ಲೋಕಾರ್ಪಣೆ ಮಾಡಿ ಶುಭ ಸಂದೇಶ ನೀಡಿದ ಅವರು, ಗ್ರಂಥ ರಚನೆ ಸುಲಭದ ಕೆಲಸವಲ್ಲ. ಅಧ್ಯಯನ ಮಾಡಿ ನಂತರ ಕೃತಿ ರಚನೆ ಮಾಡಿ ಯುಕ್ತ ಭಾಷೆಯಲ್ಲಿ ಓದುಗರಿಗೆ ಇಡುವುದು ಸಾಮಾನ್ಯವಲ್ಲ. ಇದು ಒಂದು ರೀತಿಯಲ್ಲಿ ಭಗೀರಥ ಕಾರ್ಯ, ಸಾರಸ್ವತ ಗಂಗೆಯನ್ನು ಹರಿಸುವ ಸುಂದರ ಕಾರ್ಯವನ್ನು ಕೃತಿಕರ್ತೃ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆಯ ಒಂದು ಪ್ರಮುಖ ಅಂಗ ವೀರಶೈವ ಸಾಹಿತ್ಯ. ಸಾಹಿತ್ಯವನ್ನು ವೀರಶೈವ, ಜೈನ, ವೈದಿಕ ಸಾಹಿತ್ಯವೆಂದು ವಿಂಗಡಿಸುವುದು ಔಚಿತ್ಯವಲ್ಲದಿದ್ದರೂ ಕೃತಿ ರಚನೆಯಲ್ಲಿ ಆಯಾ ಧರ್ಮಗಳ ಪ್ರೇರಣೆ, ಸ್ಪೂರ್ತಿ, ಪ್ರೋತ್ಸಾಹ ಕಡೆಗಣಿಸುವಂತಿಲ್ಲ. ಈ ಸಂಪುಟಗಳೆಲ್ಲ ಬಹಿರಂಗ ಬಂಧಕತೆಯಿಂದ ಅಂತರಂಗ ಸತ್ವದಿಂದ ನಮ್ಮ ಗಮನ ಸೆಳೆದುಕೊಳ್ಳುತ್ತವೆ. ವಿದ್ಯಾಶಂಕರರಲ್ಲಿ ಸಮಗ್ರತೆ ಮತ್ತು ಕ್ಷಮತೆಯಿದೆ. ಸಾಹಿತ್ಯ ಚರಿತ್ರೆ ವಿಮರ್ಶೆಯೂ ಹೌದು. ವಿಮರ್ಶಕ ರಾಗದ್ವೇಷರಹಿತ ಭಾವದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಮೊದಲೇ ಯತ್ನಿಸಿದ್ದೆ: ಲೇಖಕ ಡಾ.ಎಸ್. ವಿದ್ಯಾಶಂಕರ್ ಮಾತನಾಡಿ, ಸಾಹಿತ್ಯ ಚರಿತ್ರೆಯ ಈ ನನ್ನ ಯೋಜನೆಯ ಪ್ರಕಟಣೆಗೆ 25-30 ವರ್ಷಗಳ ಹಿಂದೆಯೇ ಪ್ರಯತ್ನಿಸಿದೆ. ಆದರೆ ಕೇಂದ್ರ ಸರ್ಕಾರ ಇದೊಂದು ಧರ್ಮ ಪರವಾದ ಕೃತಿ ಎಂದು ಅನುಮೋದನೆ ಕೊಡಲು ಹಿಂದೇಟು ಹಾಕಿತು. ಅಂತಹ ವೇಳೆ ಕೃತಿಯನ್ನು ಪ್ರಕಟಿಸಲು ಯಾರೂ ಮುಂದಾಗಲಿಲ್ಲ. ಇದರ ಫಲ ಸಮಾಜಕ್ಕೆ ದಕ್ಕಬೇಕೆಂಬ ಆಶಯದ ಫಲವಾಗಿ ಈ ಯೋಜನೆಗೆ ಕಾರ್ಯರೂಪ ಕೊಟ್ಟೆ. ಇನ್ನೂ ಕಂತುಗಳು ಹೊರಬರಬೇಕಾಗಿದೆ. ಈಗ ಸಾರ್ಥಕ ಭಾವ ಕಂಡಿದ್ದೇನೆ. ಕೃತಿ ಜನಸಾಮಾನ್ಯರಿಗೂ ತಲುಪಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾವೇರಿ ಕನ್ಯಾ ಗುರುಕುಲದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರೊ.ಮಲೆಯೂರು ಗುರುಸ್ವಾಮಿ ಸ್ವಾಗತಿಸಿದರು. ಎಸ್.ನಂದೀಶ್ ವಂದಿಸಿದರು, ಡಾ. ನಂದೀಶ್ ಹಂಚೆ ನಿರೂಪಿಸಿದರು.