ನರಸೀಪುರ ಸೇತುವೆಗೆ ವಿದ್ಯುತ್ ದೀಪ
ಟಿ. ನರಸೀಪುರ: ಕಪಿಲಾ ನದಿಗೆ ಅಡ್ಡಲಾಗಿ ಟಿ.ನರಸೀಪುರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಬೃಹತ್ ಸೇತುವೆಯ ಮೇಲೆ ಈ ತಿಂಗಳ ಅಂತ್ಯದೊಳಗಾಗಿ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿಧಾನ ಪರಿಷತ್ತಿಗೆ ತಿಳಿಸಿದರು.
ಕಪಿಲಾನದಿಗೆ ಅಡ್ಡಲಾಗಿ 52 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆಯ ಮೇಲೆ ವಿದ್ಯುತ್ ದೀಪಗಳಿಲ್ಲದೆ ಸಂಚಾರಕ್ಕೆ ಅನಾನುಕೂಲವಾಗಿದ್ದು, ಅಪಘಾತ ಸಂಭವಿಸುವ ಸನ್ನಿವೇಶ ಇದೆ. ಆದಕಾರಣ ಕೂಡಲೇ ವಿದ್ಯುತ್ ದೀಪಗಳನ್ನು ಅಳವಡಿಸಿ, ಸೇತುವೆ ಮೇಲಿನ ಪಾದಚಾರಿ ರಸ್ತೆ ಸರಿಪಡಿಸಬೇಕೆಂದು ಸಂದೇಶ್ ನಾಗರಾಜ್ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದ ಸೂಚನೆಗೆ ಅವರು ಲಿಖಿತ ಹೇಳಿಕೆ ನೀಡುತ್ತಿದ್ದರು. ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುಚ್ಚಕ್ತಿ ಮಂಡಲಿಗೆ 35 ಲಕ್ಷಗಳನ್ನು ಪಾವತಿಸಿದ್ದು, ಎಚ್.ಟಿ. ಲೈನ್ ಅಳವಡಿಕೆಗೆ ಹೆಚ್ಚುವರಿಯಾಗಿ 4.85 ಲಕ್ಷಗಳನ್ನು ಪಾವತಿಸಲಾಗಿದೆ. ವಿದ್ಯುತ್ ದೀಪಗಳನ್ನು ಅಳವಡಿಸಲು ಸೇತುವೆಯ ಮೇಲೆ 218 ಕಂಬಗಳನ್ನು ಹಾಕಲಾಗಿದೆ. ಇನ್ನು ಒಂದು ತಿಂಗಳ ಒಳಗಾಗಿ ವಿದ್ಯುತ್ ಸಂಪರ್ಕ ಪಡೆದು, ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು ಎಂದು ಸಚಿವರು ವಿವರಿಸಿದರು. ಪಾದಚಾರಿ ರಸ್ತೆಯನ್ನೂ ಕೂಡ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
ಟಿ. ನರಸೀಪುರ ಪಪಂ ಮೇಲ್ದರ್ಜೆ ಅಸಾಧ್ಯ
ಮೈಸೂರು: ಟಿ.ನರಸೀಪುರ ಪಪಂ ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 9,980 ಆಗಿರುವುದರಿಂದ ಅದನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಾಧ್ಯವಿಲ್ಲ ಎಂದು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ವಿಧಾನ ಪರಿಷತ್ತಿಗೆ ತಿಳಿಸಿದರು.
ಜೆಡಿಎಸ್ ಸದಸ್ಯ ಸಂದೇಶ್ ನಾಗರಾಜ್ ಅವರು ಕೇಳಿದ ಪ್ರಶ್ನೆಗೆ ಲಿಖಿತ ಮೂಲಕ ಉತ್ತರ ನೀಡಿದ ಸಚಿವರು, ಪುರಸಭೆಯನ್ನಾಗಿ ಮಾಡಲು ಕನಿಷ್ಠ 20 ಸಾವಿರ ಜನಸಂಖ್ಯೆ ಇರಬೇಕು ಮತ್ತು ಆ ಊರಿನ ಆದಾಯ ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಕನಿಷ್ಠ ವಾರ್ಷಿಕ 9 ಲಕ್ಷಗಳಿರಬೇಕಾಗುತ್ತದೆ. ಆದ್ದರಿಂದ ಪ್ರಸ್ತುತ ಟಿ. ನರಸೀಪುರವನ್ನು ಪುರಸಭೆಯನ್ನಾಗಿ ಪರಿವರ್ತಿಸಿ ಘೋಷಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು. ಟಿ.ನರಸಿಪುರ ರಸ್ತೆಗಳ ದುರಸ್ತಿ ಬಗ್ಗೆ ಸಂದೇಶ್ ನಾಗರಾಜ್ ಅವರು ಕೇಳಿದ ಪ್ರಶ್ನೆಗೆ ತಾಲೂಕು ಕಚೇರಿ ಮುಖ್ಯರಸ್ತೆಯನ್ನು ಎನ್‌ಎಚ್ 212ರವರೆಗೆ 80 ಅಡಿಗೆ ವಿಸ್ತರಿಸಲು ಜಾಗದ ಮತ್ತು ಸಂಪನ್ಮೂಲಗಳ ಕೊರತೆ ಇದೆ. ಈಗಾಗಲೇ ಲಿಂಕ್ ರಸ್ತೆಯನ್ನು ಮುಖ್ಯಮಂತ್ರಿಯವರ ಸಣ್ಣಪಟ್ಟಣ ಅಭಿವೃದ್ಧಿ ಯೋಜನೆ ಅಡಿ ಅಭಿವೃದ್ಧಿ ಪಡಿಸಲಾಗಿದೆ. ತಾಲೂಕು ಕಚೇರಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಮಾರುಕಟ್ಟೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ, ಇವೆಲ್ಲಾ ರಸ್ತೆಗಳು 60 ಅಡಿ ಅಗಲ ಇದೆ ಎಂದು ಸಚಿವರು ವಿವರಿಸಿದರು.