ತಂಬಾಕು ಬಿಡಿ, ರೇಷ್ಮೆ ಅವಲಂಬಿಸಿ
ಹುಣಸೂರು: ರೇಷ್ಮೆ ಬೆಳೆ ಅವಲಂಬಿಸಿದರೆ ಕೂಲಿ ಕಾರ್ಮಿಕರ ಸಮಸ್ಯೆ ನೀಗಿ, ಎಕರೆಗೆ ವಾರ್ಷಿಕ ಕನಿಷ್ಠ 1.50 ಲಕ್ಷ ಸರ್ಕಾರಿ ನೌಕರರ ಸಂಬಳದಂತೆ ಸಂಪಾದಿಸಬಹುದು ಎಂದು ಕೇಂದ್ರ ರೇಷ್ಮೆ ಮಂಡಳಿ ಜಿಲ್ಲಾ ಸಹಾಯಕ ನಿರ್ದೇಶಕ ಡಾ.ಯು.ಎಸ್. ಚಂದ್ರಶೇಖರ್ ಹೇಳಿದರು.
ತಾಲೂಕಿನ ಬಿಳಿಕೆರೆ ಹೋಬಳಿಯ ಉಯಿಗೊಂಡನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ಕೃಷಿ ಮತ್ತು ಹೈನುಗಾರಿಗೆ ಬಗ್ಗೆ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ತಂಬಾಕಿಗೆ ಪರ್ಯಾಯವಾಗಿ ರೇಷ್ಮೆ ಆಯ್ಕೆ ಮಾಡಿಕೊಂಡಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವು ಸಿಗಲಿದೆ. ಜಿಲ್ಲೆಯಲ್ಲಿ ಹುಣಸೂರು ಮತ್ತು ಪಿರಿಯಾಪಟ್ಟಣದಲ್ಲಿ ಹೆಚ್ಚು ತಂಬಾಕು ಬೆಳೆಗಾರರಿದ್ದು, ವಿಶ್ವ ವಾಣಿಜ್ಯ ಒಪ್ಪಂದದಂತೆ ತಂಬಾಕಿನ ಮೇಲೆ ಮುಂದೆ ನಿಷೇಧ ಹೇರುವುದಕ್ಕೆ ಮುನ್ನ ಬೆಳೆಗಾರರು ರೇಷ್ಮೆ ಬೆಳೆಯತ್ತ ಚಿಂತಿಸದಿದ್ದಲ್ಲಿ, ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಆದ್ದರಿಂದ ಕೆಂಪು ಮಣ್ಣು ಜೊತೆಗೆ ಉತ್ತಮ ಹವಾಗುಣವಿರುವ ಈ ಭಾಗದಲ್ಲಿ ರೇಷ್ಮೆ ಬೆಳೆಗೆ ಬೇಕಾದ 20 ವರ್ಷ ಕಾಲ ಫಲ ಕೊಡುವ ಹಿಪ್ಪು ನೇರಳೆ ಗಿಡ ಕೇವಲ ರೇಷ್ಮೆಗೆ ಮಾತ್ರವಲ್ಲದೆ ಹಸುಗಳಿಗೂ ಉತ್ತಮ ಮೇವಾಗಲಿದೆ. ಇದರಿಂದ ಹೈನುಗಾರಿಗೆ ಮಾಡುವವರ ಮೇವಿನ ಸಮಸ್ಯೆಯೂ ನೀಗಲಿದೆ. ವಿಶ್ವದಲ್ಲೇ ರೇಷ್ಮೆ ಬೆಳೆಯಲ್ಲಿ ಭಾರತ ದೇಶ 2ನೇ ಸ್ಥಾನದಲ್ಲಿದ್ದರೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಸರ್ಕಾರದ ಸಹಾಯಧನ: ತಂಬಾಕಿನ ಬೆಲೆಯಲ್ಲಿ ಏರುಪೇರಾದರೆ ಬಯೋಲ್ಟಿನ್ ರೇಷ್ಮೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 340-400 ಸಿಗುತ್ತಿದೆ. ಇದಕ್ಕಾಗಿ ಸರ್ಕಾರಗಳು ಸಹಾಯಧನ ಸಹ ನೀಡುತ್ತಿದೆ. ಹುಳು ಸಾಕಣೆಯಿಂದ ಬರುವ ತ್ಯಾಜ್ಯ ಹಸುವಿನ ಮೇವಾಗಲಿದೆ ನಂತರದಲ್ಲಿ ಹಸುವಿನಿಂದ ಬರುವ ಸೆಗಣಿಯಿಂದ ಮನೆಯಲ್ಲೇ ಬೇಕಾದ ಬಯೋಗ್ಯಾಸ್ ಉತ್ಪಾದಿಸಿ ಶಾಖೋತ್ಪನ್ನ ಜೊತೆಗೆ ವಿದ್ಯುತ್ ಉಳಿತಾಯ ಮಾಡಬಹುದು ಎಂದು ಹೇಳಿದರು.
ಬೈಫ್ ಗ್ರಾಮೀಣಾಭಿವೃದ್ಧಿ ಯೋಜನೆಯ ಎಂ.ಜೆ.ಪಟಾಕರ್ ಮಾತನಾಡಿ, ಹೈನುಗಾರರಿಂದ ದುಬಾರಿ ಬೆಲೆತೆತ್ತು ಮೇವು ಖರೀದಿಸುತ್ತಿದ್ದಾರೆ. ಆದರೆ ಕಡಿಮೆ ಖರ್ಚಿನಲ್ಲಿಯು ಉತ್ತಮವಾಗಿ ಹೈನುಗಾರಿಕೆಯಿಂದ ಲಾಭ ಪಡೆಯಲು ಗ್ರಾಮೀಣ ಭಾಗದ ಜನತೆ ಹೈನುಗಾರಿಕೆ ಜೊತೆ ಜೊತೆಯಲ್ಲಿಯೇ ಹಿಪ್ಪು ನೇರಳೆ ಬೆಳೆಸಿ ಇತರೆ ಹಸು ಸಾಕಾಣಿಕೆದಾರರಿಗೂ ಮಾರಾಟ ಮಾಡಬಹುದಾಗಿದೆ. ಹೈನುಗಾರರು ಕಾಲ ಕಾಲಕ್ಕೆ ತಜ್ಞರ ಸಲಹೆ ಪಡೆದು ಹಸುಗಳಿಗೆ ಲಸಿಕೆ ಹಾಕಿಸಿ, ರಾಸುಗಳಿಗೆ ತಗಲುವ ರೋಗಗಳನ್ನು ತಡೆಗಟ್ಟುವಂತೆ ಕರೆ ನೀಡಿದರು.
ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಮಹಬಲಕುಲಾಲ್, ತಹಸೀಲ್ದಾರ್ ವೆಂಕಟಾಚಲಪ್ಪ, ಸಂಸ್ಥೆಯ ತಾಲೂಕು ಕೃಷಿ ಮೇಲ್ವಿಚಾರಕ ದಯಾಪ್ರಸಾದ್ ಮಾತನಾಡಿದರು. ಪ್ರಗತಿಪರ ರೈತರಾದ ಮಧುಸೂದನ್, ಕುಟುವಾಡಿ ಸಿ. ರವಿ, ಕೃಷ್ಣೇಗೌಡ, ಗೋವಿಂದನಹಳ್ಳಿ ವಲಯ ಹೈನುಗಾರಿಕೆ ಮೇಲ್ವಿಚಾರಕ ದಿವಾಕರ್ ಇದ್ದರು.