ತಾಲೂಕಲ್ಲಿ ಬರ ಪರಿಸ್ಥಿತಿ ನಿರ್ಮಾಣ
ಕ.ಪ್ರ. ವಾರ್ತೆ ಎಚ್.ಡಿ. ಕೋಟೆ ಜು.3
ತಾಲೂಕಿನಲ್ಲಿ ಬರ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಜಿಪಂ ಪ್ರಭಾರ ಅಧ್ಯಕ್ಷ ಸಿ.ಜೆ.ದ್ವಾರಕೀಶ್ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಮಳೆ ಕೈ ಕೊಟ್ಟಿದೆ. ಮುಂಗಾರು ಮಳೆ ವಿಫಲವಾಗಿದೆ. ಮುಂದಿನ 3 ರಿಂದ 4 ದಿನಗಳಲ್ಲಿ ಮಳೆ ಆಗಲಿಲ್ಲ ಎಂದರೆ ಬೆಳೆ ಪರಿಸ್ಥಿತಿ ಕಷ್ಟ. ಇಂತಹ ವೇಳೆಯಲ್ಲಿ ರೈತರ ನೆರವಿಗೆ ಬಂದಿರುವ ಸರ್ಕಾರ, ಬೆಳೆ ವಿಮೆ ಯೋಜನೆಯನ್ನು ಈ ತಿಂಗಳ ಅಂತ್ಯದವರೆಗೆ ವಿಸ್ತರಿಸಿದೆ. ತಾಲೂಕಿನ ಪ್ರಮುಖ ಹೋಬಳಿಯಲ್ಲಿ ಯೋಜನೆಯ ಬಗ್ಗೆ ಜಾಥಾ ನಡೆಸಿ, ರೈತರಿಗೆ ಅರಿವು ಮೂಡಿಸಿ ಎಂದು ಹೇಳಿದರು.
ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂದರೆ ತಾಲೂಕಿನಲ್ಲಿ 6 ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.82 ರಷ್ಟು ಫಲಿತಾಂಶ ಬಂದಿದ್ದರೆ, ಈ ಬಾರಿ ಅದು ಶೇ.73.7ಕ್ಕೆ ಕುಸಿದಿದೆ. ಇದಕ್ಕೆ ಕಾರಣವೇನು? ಈ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶ ಮತ್ತಷ್ಟು ಉತ್ತಮವಾಗಿ ಬರಬೇಕು. ಶಿಕ್ಷಣದ ಮಟ್ಟ ಹೆಚ್ಚಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ಇದನ್ನು ಮನಗಂಡು ಉತ್ತಮ ಫಲಿತಾಂಶಕ್ಕೆ ಪ್ರಾಮಾಣಿಕ ಪ್ರಯತ್ನ ಪಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್ ಅವರಿಗೆ ತಿಳಿಸಿದರು.
40 ಶಿಕ್ಷಕರ ಕೊರತೆ: ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ 30 ಪ್ರೌಢಶಾಲೆಗಳಿದ್ದು, ಒಟ್ಟು 40 ಜನ ಶಿಕ್ಷಕರ ಕೊರತೆ ಇದೆ. ಅದರಲ್ಲೂ ವಿಶೇಷವಾಗಿ ಆಂಗ್ಲ ಮತ್ತು ಗಣಿತ ವಿಷಯಗಳಲ್ಲಿ ಶಿಕ್ಷಕರು ಇಲ್ಲ. ಬೇರೆಡೆಯಿಂದ ಶಿಕ್ಷಕರನ್ನು ನಿಯೋಜನೆಗೊಳಿಸಿದರೂ, ವಾರದಲ್ಲಿ ಮೂರು ದಿನ ಮಾತ್ರ ಪಾಠ ಮಾಡುವುದರಿಂದ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗಲಿಲ್ಲ ಎಂದರು.
ಈಗ ಸರ್ಕಾರ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡಲು ಆದೇಶ ಕೊಟ್ಟಿದ್ದು, 15 ಜನ ಶಿಕ್ಷಕರನ್ನು ನೇಮಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಮುಂದಿನ 15 ದಿನಗಳಲ್ಲಿ ಈ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು. ರೇಷ್ಮೆ ಕೃಷಿ ಲಾಭದಾಯಕವಾಗಿದ್ದು, ರೈತರು ರೇಷ್ಮೆ ಕೃಷಿಯತ್ತ ವಾಲುತ್ತಿದ್ದಾರೆ ಎಂದರೆ ಅವರಿಗೆ ಉತ್ತಮ ಪ್ರೋತ್ಸಾಹ ಕೊಡಿ. ಹನಿ ನೀರು ಸಂಗ್ರಹಣೆ ಯೋಜನೆಯಲ್ಲಿ ಕೊಡುವ ಶೇ.90 ರಷ್ಟು ಸಹಾಯಧನವನ್ನು ಒಂದೆ ಬಾರಿ ಕೊಡಬೇಡಿ. ಮೂರು ಹಂತಗಳಲ್ಲಿ ಅಂದರೆ ಮೂರು ವರ್ಷಗಳಲ್ಲಿ ಮೊದಲ ವರ್ಷದಲ್ಲಿ ಶೇ.50, ನಂತರದ ಎರಡನೇ ವರ್ಷದಲ್ಲಿ ಶೇ.20 ಮತ್ತು ಮೂರನೇ ವರ್ಷದಲ್ಲಿ ಶೇ.20ರಷ್ಟು ಕೊಡಿ ಎಂದು ಸಲಹೆ ನೀಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ತಾಲೂಕಿನಲ್ಲಿ ಸರಗೂರು ಮತ್ತು ಎಚ್.ಡಿ. ಕೋಟೆ ವಿಭಾಗ ಎರಡೂ ಸೇರಿ 78 ಬಾಕಿ ಇದೆ. ಯೋಜನೆ ಸಂಪೂರ್ಣ ಮಾಡಲಿಕ್ಕೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕು. ಯೋಜನೆ ಅನುಷ್ಠಾನಕ್ಕೆ ತಡವಾಗಿರುವುದಕ್ಕೆ ಕಾರಣ ಕೇಳಿದರು. ಇದಕ್ಕೆ ಉತ್ತರಿಸಿದ ಎಇಇ ರಾಮಸ್ವಾಮಿ, ತಾಲೂಕು ವಿಸ್ತೀರ್ಣದಲ್ಲಿ ಬೇರೆ ತಾಲೂಕುಗಳಿಗಿಂತ ದೊಡ್ಡದಿದ್ದು, ಯೋಜನೆ ಸರಿಯಾಗಿ ರೂಪಿಸಿರಲಿಲ್ಲ. ಆದರೆ ಇದಕ್ಕೆ ಟ್ರಾನ್ಸ್ಫಾರ್ಮರ್ಗಳ ಕೊರತೆ ಇದೆ. ತಾಲೂಕಿನಲ್ಲಿ 1,300 ಟ್ರಾನ್ಸ್ಫಾರ್ಮರ್ಗಳಿದ್ದು. ಪ್ರತಿ ತಿಂಗಳು ಒಂದಿಲ್ಲೊಂದು ಕಡೆ ಒಟ್ಟು 30 ರಿಂದ 45 ಟ್ರಾನ್ಸ್ಫಾರ್ಮರ್ಗಳು ಕೆಡುತ್ತಿವೆ. ಈ ಸಂಬಂಧ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ರೀತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ. ಆರೋಗ್ಯ, ಸಾಮಾಜಿಕ ಅರಣ್ಯ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಂಕಿ ಅಂಶಗಳ ಪರಿಶೀಲನೆ ನಡೆಸಿ, ಕೆಲವು ಸಲಹೆಗಳನ್ನು ಕೊಟ್ಟರು. ಸಭೆ ನಡುವೆ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಭಾಸ್ಕರ್, ಪ್ರಗತಿ ಪರಿಶೀಲನೆ ಸಭೆಗೆ ಎಂದೂ ಹಾಜರಾಗುವುದಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕೂಡ ಇಲ್ಲ. ಅಧ್ಯಕ್ಷರು ಆಸ್ಪತ್ರೆಗೆ ಭೇಟಿ ಕೊಡಬೇಕು ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷರಿಗೆ ಮನವಿ ಮಾಡಿದರು. ತಾಪಂ ಅಧ್ಯಕ್ಷೆ ಮಹೇಶ್ವರಿ, ಉಪಾಧ್ಯಕ್ಷೆ ಪುಟ್ಟಾಲಮ್ಮ, ಸದಸ್ಯರಾದ ಮಹೇಂದ್ರ, ಜಿಪಂ ಸದಸ್ಯೆ ಭಾಗ್ಯಲಕ್ಷ್ಮಿ, ತಾಪಂ ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.