ವಾಹನ ದುರಸ್ತಿದಾರರ ಧರಣಿ ಅಂತ್ಯ
ಮೈಸೂರು: ಆಟೋ ನಗರ ನಿರ್ಮಾಣಕ್ಕೆ ಆಗ್ರಹಿಸಿ ಮೈಸೂರು ನಗರ ಮೋಟಾರು ವಾಹನ ದುರಸ್ತಿ ಮಾಡುವ ಕಾರ್ಮಿಕರ ಒಕ್ಕೂಟದವರು ವಾರದಿಂದ ಎಂಡಿಎ ಕಚೇರಿ ಎದುರು ಹಮ್ಮಿಕೊಂಡಿದ್ದ ಧರಣಿ ಗುರುವಾರ ಅಂತ್ಯಗೊಂಡಿತು.
ನಗರದ ನಾಲ್ಕು ದಿಕ್ಕಿನಲ್ಲೂ ಆಟೊನಗರ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಮೊದಲ ಹಂತವಾಗಿ ಮೆಟ್ಟಗಳ್ಳಿಯಲ್ಲಿ ಆಟೊ ನಗರವನ್ನು 6 ತಿಂಗಳೊಳಗೆ ನಿರ್ಮಿಸಿಕೊಡಲಾಗುವುದು ಎಂದು ಪ್ರಭಾರ ಜಿಲ್ಲಾಧಿಕಾರಿ ಎಸ್. ಪಾಲಯ್ಯ ಭರವಸೆ ನೀಡಿದ ಹಿನ್ನೆಲೆಯಲ್ಲಿ ಎಂಟು ದಿನಗಳಿಂದ ನಡೆಯುತ್ತಿದ್ದ ಧರಣಿ ಕೊನೆಗೊಂಡಿತು. ಸ್ಥಳಕ್ಕೆ ಆಗಮಿಸಿದ ಪ್ರಭಾರ ಜಿಲ್ಲಾಧಿಕಾರಿ ಎಸ್. ಪಾಲಯ್ಯ, ಆಟೊ ನಗರ ನಿರ್ಮಿಸುವ ಕುರಿತು ನರಸಿಂಹ, ಚಾಮರಾಜ ಹಾಗೂ ಕೃಷ್ಣರಾಜ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಸ್ಥಳ ಗುರುತಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಆಟೊ ನಗರ ನಿರ್ಮಾಣ ಆಗುವವರೆಗೂ ತಾತ್ಕಾಲಿಕವಾಗಿ ರಸ್ತೆ ಬೀದಿಯಲ್ಲಿ ಗ್ಯಾರೇಜ್ ನಡೆಸಿಕೊಂಡು ಹೋಗಬಹುದು ಎಂದು ಅವರು ಭರವಸೆ ನೀಡಿದರು. ಒಕ್ಕೂಟದ ಅಧ್ಯಕ್ಷ ಬಿ.ಎನ್. ಮಹೇಶ್ ರಾಜೇ ಅರಸ್, ಪದಾಧಿಕಾರಿಗಳಾದ ಸೈಯದ್ ನಯಾಜ್ ಅಹಮ್ಮದ್, ಅಮಾನುಲ್ಲಾ, ಡಿ. ನಾಗಾರಾಜು, ಎಂ.ಎಲ್. ಶಂಕರ್, ಪದ್ಮನಾಭ್, ಜಯರಾಮ್, ಫೈಸಲ್ ಅಹಮ್ಮದ್, ವಿ.ಪಿ. ಪ್ರಸಾದ್, ಅಸ್ಲಂ ಆಲಿ, ಅಬಿಬ್ ಉಲ್ಲಾ ಇದ್ದರು.