ಹೆಣ್ಣು ಮಕ್ಕಳಿಗೆ ಅವಕಾಶ ಲಭಿಸಲಿ
ಮೈಸೂರು: ಇನ್ನು ಮುಂದೆ ಹೆಣ್ಣು ಮಕ್ಕಳಿಗೆ ಉತ್ತಮ ಅವಕಾಶಗಳು ಲಭ್ಯವಾಗಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ. ಟಿ.ಸಿ ಶಿವಶಂಕರಮೂರ್ತಿ ಹೇಳಿದರು.
ನಟರಾಜ ಮಹಿಳಾ ಪದವಿಪೂರ್ವ ಕಾಲೇಜು ವತಿಯಿಂದ ಗುರುವಾರ ಏರ್ಪಡಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರನ್ನು ಸ್ವಾಗತಿಸುವ ಸ್ನೇಹ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾಡಿದರು. ನಮ್ಮ ದೇಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದು ಹೆಣ್ಣು ಮಕ್ಕಳಿಗೆ ಇನ್ನು ಮುಂದೆ ಅವಕಾಶಗಳು ಲಭ್ಯವಾಗಬೇಕಿದೆ ಎಂದು ಹೇಳುತ್ತ ಪ್ರತಿ ವರ್ಷ ಶಾಲೆಗೆ 220 ಮಿಲಿಯನ್ ವಿದ್ಯಾರ್ಥಿಗಳು ದಾಖಲಾದರೆ ಪದವಿ ಹಂತಕ್ಕೆ ಬರುವಷ್ಟರಲ್ಲಿ 50 ಮಿಲಿಯನ್ ಆಗಿರುತ್ತಾರೆ. ಇದು ನಮ್ಮ ಶೈಕ್ಷಣಿಕ ವ್ಯವಸ್ಥೆ ಎಂದು ವಿಷಾದಿಸಿದರು.
ವಿಶ್ವದಲ್ಲಿರುವ 114 ವಿಜ್ಞಾನಿಗಳಲ್ಲಿ ಮೂವರು ಭಾರತೀಯರಿಗೆ ಮಾತ್ರ ನೊಬೆಲ್ ಪಾರಿತೋಷಕ ಲಭ್ಯವಾಗಿದೆ. ಹೀಗಾಗಿ ನಮ್ಮ ದೇಶ ವಿಜ್ಞಾನ ತಂತ್ರಜ್ಞಾನದ ಕಡೆಗೆ ಮುನ್ನುಗ್ಗಬೇಕಿದೆ ಎಂದ ಅವರು, ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಮಾತ್ರ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗಿ ಬೆಳೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಹೊಸಮಠದ ಅಧ್ಯಕ್ಷ ಚಿದಾನಂದಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಯಿತು. ಮಹಾರಾಜ ಕಾಲೇಜು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಎಸ್. ಶಿವರಾಜಪ್ಪ, ಪ್ರೊ. ಎಸ್. ನಂಜುಂಡಯ್ಯ ಪ್ರೊ. ಸಿ.ಎಂ. ಧರ್ಮಪ್ಪ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜಿ. ಪ್ರಸಾದಮೂರ್ತಿ ಇದ್ದರು.