ಕನಿಷ್ಠ ವೇತನ ಸಲಹೆ ಆಹ್ವಾನ
ಮೈಸೂರು: ಅಗರಬತ್ತಿ ಉದ್ದಿಮೆಯಲ್ಲಿ ತೊಡಗಿರುವ ಕಾರ್ಮಿಕರಿಗೆ ಕನಿಷ್ಠ ವೇತನ ದರ ಪರಿಷ್ಕರಿಸಲು ಕನಿಷ್ಠ ವೇತನ ಕಾಯ್ದೆ ಅಡಿಯಲ್ಲಿ ತ್ರೀಪಕ್ಷಿಯ ಸಮಿತಿ ರಚಿಸಿದೆ. ಅಗರಬತ್ತಿ ಉದ್ದಿಮೆಯಲ್ಲಿನ ಕಾರ್ಮಿಕರಿಗೆ ಕನಿಷ್ಠ ವೇತನ ದರಗಳ ಪರಿಷ್ಕರಣೆ ಮಾಡುವ ಸಂಬಂಧ ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಆಸಕ್ತರು ತಮ್ಮ ಸಲಹೆಗಳನ್ನು ಲಿಖಿತವಾಗಿ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ, ಕಾರ್ಮಿಕ ಭವನ, ಡೇರಿ ವೃತ್ತ, ಬೆಂಗಳೂರು- 560029. ಇವರಿಗೆ ಜು.15 ರೊಳಗೆ ಸಲ್ಲಿಸಬಹುದು. ಅಥವಾ ಜು.15 ರಂದು ಖುದ್ದಾಗಿ ಕೊಠಡಿ ಸಂಖ್ಯೆ- 2(ಸಮಿತಿ ಸಭಾಂಗಣ), ಕಾರ್ಮಿಕ ಆಯುಕ್ತರು ಹಾಗೂ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ, ಕಾರ್ಮಿಕ ಭವನ, ಬೆಂಗಳೂರು- 9. ಇವರ ಮುಂದೆ ಅಹವಾಲು ಸಲ್ಲಿಸಬಹುದು.
ಪಾಲಯ್ಯಗೆ ಐಎಎಸ್ಗೆ ಬಡ್ತಿ
ಮೈಸೂರು: ಎಂಡಿಎ ಆಯುಕ್ತ ಹಾಗೂ ಹಿರಿಯ ಕೆಎಎಸ್ ಅಧಿಕಾರಿಯಾಗಿದ್ದ ಎಸ್.ಪಾಲಯ್ಯ ಅವರನ್ನು ಕೇಂದ್ರ ಸರ್ಕಾರ ಐಎಎಸ್ ದರ್ಜೆಗೆ ಉನ್ನತೀಕರಿಸಿದೆ. ಕೇಂದ್ರದ ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯವು ಎಂಡಿಎ ಆಯುಕ್ತರಾಗಿ ಮತ್ತು ಪ್ರಭಾರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಾಲಯ್ಯ ಅವರನ್ನು ಐಎಎಸ್ ದರ್ಜೆಗೆ ಉನ್ನತೀಕರಿಸಿದೆ.