ನದಿಗೆ ಹಾರಿ ವೃದ್ಧ ದಂಪತಿ ಆತ್ಮಹತ್ಯೆ
ಕ.ಪ್ರ. ವಾರ್ತೆ ಹುಣಸೂರು ಜು.4
ಜೀವನದಲ್ಲಿ ಮನನೊಂದ ವೃದ್ಧ ದಂಪತಿ ಲಕ್ಷ್ಮಣತೀರ್ಥ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ತಟ್ಟೆಕೆರೆ ಗೇಟ್ನಲ್ಲಿ (ಹೊಸಕೋಟೆ) ಹೊಟೇಲ್ ನಡೆಸುತ್ತಿದ್ದ ಮಹದೇವಾಚಾರ್ (58) ಮತ್ತು ಅವರ ಪತ್ನಿ ಪದ್ಮಮ್ಮ (48) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಒಬ್ಬ ಪುತ್ರ ಇದ್ದಾನೆ.
ಕಳೆದ ಬುಧವಾರ ಸಂಜೆಯಿಂದ ತಟ್ಟೆಕೆರೆ ಗೇಟ್ನಿಂದ ನಾಪತ್ತೆಯಾಗಿದ್ದ ಈ ದಂಪತಿ, ಹುಣಸೂರು ಪಟ್ಟಣದ ನರಸಿಂಹಸ್ವಾಮಿ ತಿಟ್ಟಿನ ತಮ್ಮ ಸಂಬಂಧಿಕರ ಮನೆಯಲ್ಲಿ ಇದ್ದು, ಶುಕ್ರವಾರ ಬೆಳಗಿನ ಜಾವ ಪಟ್ಟಣದ ಹಳೇ ಸೇತುವೆಯ ಮೇಲಿನಿಂದ ಜಿಗಿದು ನೀರಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಅಂದಿನಿಂದಲೂ ತಂದೆ- ತಾಯಿಗಾಗಿ ಹುಡುಕಾಟ ನಡೆಸಿದ್ದ ಪುತ್ರ ಉಮೇಶನಿಗೆ ನದಿಯಲ್ಲಿ ಶವವೊಂದು ಕಾಣಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ತಕ್ಷಣ ನೋಡಿದಾಗ ಇಬ್ಬರ ಚಪ್ಪಲಿಗಳು ನೀರಿನಲ್ಲಿ ತೇಲಾಡುತ್ತಿದ್ದವು. ನಂತರ ತಾಯಿ ತೊಟ್ಟಿದ್ದ ಸೀರೆಯಿಂದ ಅವರನ್ನು ಪತ್ತೆ ಮಾಡಲಾಯಿತು.
ನಂತರ ನದಿಯ ಕಲುಷಿತ ನೀರಿಗಿಳಿದ ಈಜು ಪಟು ಕಲ್ಕುಣಿಕೆಯ ಮಹೇಂದ್ರಕುಮಾರ್, ಪದ್ಮಮ್ಮನ ಶವ ಎಳೆದು ದಡಕ್ಕೆ ತಂದರು. ನಂತರ ತೆಪ್ಪದ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜು ತಜ್ಞರು ಎರಡು ಗಂಟೆ ಕಾಲ ಹುಡುಕಿದರು ಮಹದೇವಾಚಾರ್ ಅವರ ಶವ ಸಿಗಲಿಲ್ಲವಾದರೂ ಸಂಜೆ 5ರ ವೇಳೆಗೆ ಶವ ಪತ್ತೆಯಾಯಿತು.
ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಹಳೇ ಸೇತುವೆ ಮೇಲೆ, ನದಿ ದಡದಲ್ಲಿ ನೂರಾರು ಮಂದಿ ನಿಂತು ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸಿದರು. ಜನಜಂಗುಳಿಯಿಂದಾಗಿ ಸೇತುವೆ ಮೇಲಿನ ಸಂಚಾರವನ್ನು ರದ್ದುಗೊಳಿಸಿದ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್, ಎಸ್ಐ ಚನ್ನವೀರನಾಯಕ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.