ಶಾಲೆಗೆ ರಸ್ತೆ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ
ಎಚ್.ಡಿ. ಕೋಟೆ: ತಾಲೂಕಿನ ಯರಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಸರಿಯಾದ ರಸ್ತೆ ಇಲ್ಲ ಎಂದು ಎಸ್ಡಿಎಂಸಿ ಸದಸ್ಯರು ಹಾಗೂ ಪೋಷಕರು ಶುಕ್ರವಾರ ಶಾಲಾ ಮುಂಭಾಗ ಪ್ರತಿಭಟಿಸಿದರು.
ಶಾಲೆಯನ್ನು ಹ್ಯಾಂಡ್ಪೋಸ್ಟ್ ಕೆರೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದ್ದು, ಮಳೆ ಬಂದರೆ ರಸ್ತೆ ಕೆಸರಿನಿಂದ ಆವರಿಸಿಕೊಂಡು ಶಾಲಾ ಮಕ್ಕಳು ನಡೆದಾಡಲು ಆಗುವುದಿಲ್ಲ. ಅಲ್ಲದೇ ಎಷ್ಟೋ ಮಕ್ಕಳು ಈ ರಸ್ತೆಯಲ್ಲಿ ಬಿದ್ದು ಬಟ್ಟೆಗಳನ್ನು ಬದಿ ಮಾಡಿಕೊಂಡು ಶಾಲೆಗೆ ತೆರಳದೆ ಹಿಂದಿರುಗಿದ್ದಾರೆ ಎಂದು ಪೋಷಕರು ಆರೋಪಿಸಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಗ್ರಾಪಂ ಸದಸ್ಯ ಪುಟ್ಟರಾಜು ಮಾತನಾಡಿ, ಶಾಲೆಯಲ್ಲಿ ಕುಡಿಯಲು ನೀರಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ದಂಡಾಧಿಕಾರಿ ಶಿವಸ್ವಾಮಿ, ಉತ್ತಮ ರಸ್ತೆ ಹಾಗೂ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ಕೊಟ್ಟ ನಂತರ ಪ್ರತಿಭಟನೆ ಕೈ ಬಿಡಲಾಯಿತು. ಎಸ್ಡಿಎಂಸಿ ಅಧ್ಯಕ್ಷ ರವಿಗೌಡ, ಸದಸ್ಯರಾದ ಸೋಮೇಗೌಡ, ಪುಟ್ಟತಾಯಮ್ಮ, ಸಿದ್ದರಾಜು, ನಾಗರಾಜು, ನಂಜಶೆಟ್ಟಿ, ಪೋಷಕರಾದ ಚಿಕ್ಕಣ್ಣ, ನಾಗಣ್ಣ, ರುದ್ರೇಗೌಡ ಇದ್ದರು.