ಸಂಸ್ಕೃತಿಯು ಜೀವನದ ಭಾಗವಾಗಲಿ
ನಂಜನಗೂಡು: ಇಡೀ ಜಗತ್ತಿಗೆ ವಸುದೈವ ಕುಟುಂಬಕಂ ಎಂಬ ಮಾತನ್ನು ಸಾರಿದ ಭಾರತೀಯ ಸಂಸ್ಕೃತಿಯು ಜೀವನದ ಭಾಗವಾಗುವಂತಾಗಬೇಕು ಎಂದು ರಾಷ್ಟ್ರೋತ್ಥಾನ ಪರಿಷತ್ನ ಮಾರ್ಗದರ್ಶಕ ಮೈ.ಚ. ಜಯದೇವ್ ಅಭಿಪ್ರಾಯಪಟ್ಟರು.
ಭಾರತೀಯ ಸಾಂಸ್ಕೃತಿಕ ಪರಿಷತ್ನ ಸಹಯೋಗ ಹಾಗೂ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರಿ ಧಾರ್ಮಿಕ ದತ್ತಿ ಮತ್ತು ಜೆಎಸ್ಎಸ್ ಮಹಾವಿದ್ಯಾಪೀಠಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಸುತ್ತೂರು ಶ್ರೀಕ್ಷೇತ್ರದ ಚಿಂತನ-ಮಂಥನ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಹಿನ್ನಡೆ ಇಡೀ ಜಗತ್ತಿಗೇ ನಷ್ಟ. ಪಾಶ್ಚಾತ್ಯರು ಜಗತ್ತನ್ನು ಮಾರುಕಟ್ಟೆ ದೃಷ್ಟಿಯಿಂದ ನೋಡಿದ್ದಾರೆ. ಆದರೆ ಪ್ರಕೃತಿಯ ಆರಾಧಕಾರಾದ ನಾವು ಎಲ್ಲದರಲ್ಲೂ ಭಗವಂತನ ರೂಪ ಕಂಡಿದ್ದೇವೆ ಎಂದರು.
ರಾಷ್ಟ್ರೀಯತೆ ಭಾವನೆಯನ್ನು ಜಾಗೃತಗೊಳಿಸಿದ ಮಹಾನುಭಾವರು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಅದರ ಉನ್ನತಿಗಾಗಿ ಗಂಭೀರವಾಗಿ ಚಿಂತಿಸಬೇಕಿದೆ. ರಾಷ್ಟ್ರೀಯ ಮನೋಧರ್ಮದಿಂದ ವಿಮುಖರಾಗುತ್ತಿದ್ದೇವೆ. ಸಾಂಸ್ಕೃತಿಕ ಶ್ರದ್ಧೆಯನ್ನು ಬೆಳೆಸಬೇಕು ಎಂದರು.
ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಸಂಸ್ಕೃತಿಯ ಮೇಲೆ ಆಘಾತ ಉಂಟು ಮಾಡುತ್ತಿರುವ ದುಷ್ಟಶಕ್ತಿಗಳ ಪೈಕಿ ಮುಂಚೂಣಿಯಲ್ಲಿ ದೃಶ್ಯ ಮಾಧ್ಯಮ ನಿಲ್ಲುತ್ತದೆ ಎಂದು ಹೇಳಿದರು.
ಅಂತರಂಗದ ಸತ್ಯ ಅರಿಯಿರಿ: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಹೊರಗಿನ ಸತ್ಯವನ್ನು ಕಂಡುಕೊಳ್ಳುವುದಕ್ಕಿಂತ ಮನುಷ್ಯನ ಅಂತರಂಗದ ಸತ್ಯವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಕ್ಕಾಗಿ ಭಾರತೀಯ ಸಂತರಿಗೆ ಮಹತ್ವದ ಸ್ಥಾನ ದೊರಕಿದೆ ಎಂದರು.
ವಿಜಾಪುರ ಜ್ಞಾನಯೋಗಾಶ್ರವುದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯ ಮತ್ತೆ ಮತ್ತೆ ಕೂಡುತ್ತಿರಬೇಕು. ಶರಣ ಬಸವಣ್ಣ ಮಾಡಿದ್ದು ಅದೆ. ಎಲ್ಲರನ್ನೂ ನಮ್ಮವರು ಎಂದು ಕರೆದರು, ಕೈ ಮುಗಿದರು. ಕೂಡ್ರಿ ಅಂದರು. ಎಲ್ಲರೂ ಆನಂದವಾಗಿರುವುದು. ವಿಶ್ವಾತ್ಮನ ಧ್ಯಾನದಲ್ಲಿ ನಮ್ಮನ್ನು ನಾವು ಮರೆಯುವುದೇ ಸಮೃದ್ಧ ಜೀವನ ಎಂದು ಹೇಳಿದರು.
ಶಿಬಿರದ ವರದಿ ಶ್ರೀಪತಿ ಮಂಡಿಸಿದರು. ಶಿಬಿರಾರ್ಥಿಗಳಾದ ಸಿದ್ದಲಿಂಗದೇವರು, ಶರಣೆ ನೀಲಾಂಬಿಕೆ, ಹಾಲಯ್ಯ, ಸಂಗೀತ, ನವೀನ್, ಸವಿತಾ ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ಸಿದ್ಧಲಿಂಗ ಶಿವಾನಂದ ಸ್ವಾಮೀಜಿ ಪ್ರಾರ್ಥಿಸಿದರು. ಕೆ.ಪಿ. ಬಸವರಾಜು ಸ್ವಾಗತಿಸಿದರು. ಎಸ್. ನಂದೀಶ್ ವಂದಿಸಿದರು. ಆಲಮಟ್ಟಿ ಸ್ವಾಮೀಜಿ ನಿರೂಪಿಸಿದರು.