ಗ್ರೀನ್ಬಡ್ಸ್ ಸಂಸ್ಥೆ ಮೇಲೆ ಸಿಐಡಿ ಪೊಲೀಸರ ದಾಳಿ
ಮೈಸೂರು: ಠೇವಣಿದಾರರಿಗೆ ವಂಚಿಸಿದ ಆರೋಪ ಹೊತ್ತಿರುವ ಗ್ರೀನ್ಬಡ್ಸ್ ಆಗ್ರೋ ಫಾರ್ಂ ಲಿಮಿಟೆಡ್ನ ಪ್ರಧಾನ ಕಚೇರಿ ಮೇಲೆ ಬೆಂಗಳೂರಿನ ಸಿಐಡಿ ಪೊಲೀಸರು ಶನಿವಾರ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ನಜರಬಾದ್ನಲ್ಲಿರುವ ಸಂಸ್ಥೆ 1 ವರ್ಷದಿಂದ ಬಾಗಿಲು ಮುಚ್ಚಿದ್ದು, ಸಿಐಡಿ ತಂಡ ಶನಿವಾರ ದಾಳಿ ನಡೆಸಿ ಪರಿಶೀಲಿಸಿದರು. ಕಚೇರಿಯಲ್ಲಿದ್ದ ದಾಖಲೆ, ಕಂಪ್ಯೂಟರ್ ಹಾಗೂ ಹಾರ್ಡ್ಡಿಸ್ಕ್ಗಳನ್ನು ವಶಪಡಿಸಿಕೊಂಡು ಬೀಗಮುದ್ರೆ ಹಾಕಿದರು. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಗ್ರೀನ್ ಬಡ್ಸ್ ಸಂಸ್ಥೆ ಶಾಖೆಗಳಿದ್ದು, ಠೇವಣಿದಾರರಿಗೆ ಹಣ ಮರುಪಾವತಿ ಮಾಡದ ಸಂಬಂಧ ಒಟ್ಟು 36 ದೂರುಗಳು ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಲ್. ರವೀಂದ್ರನಾಥ ಸೇರಿದಂತೆ 7 ಮಂದಿ ವಿರುದ್ಧ ಮೈಸೂರಿನಲ್ಲಿ 7, ಮಡಿಕೇರಿಯಲ್ಲಿ 8, ಬಳ್ಳಾರಿ, ಚಾಮರಾಜನಗರದಲ್ಲಿ ತಲಾ 4, ಮಂಡ್ಯದಲ್ಲಿ 3, ಚಿತ್ರದುರ್ಗ ಜಿಲ್ಲೆಯಲ್ಲಿ 1 ದೂರು ದಾಖಲಾಗಿವೆ. ಈ ಪ್ರಕರಣಗಳ ಗಂಭೀರತೆ ಅರಿತ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಸರ್ಚ್ ವಾರೆಂಟ್ ದೊರೆತ ಬಳಿಕ ಸಂಸ್ಥೆಯ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿ, ದಾಖಲೆ ವಶಪಡಿಸಿಕೊಂಡಿದ್ದಾರೆ.