ಮಹಿಳಾ ಕಾನೂನು ದುರುಪಯೋಗ ತಡೆಗೆ ಸಮಿತಿ
ಮೈಸೂರು: ಸರ್ಕಾರಿ ಹಾಗೂ ಖಾಸಗಿ ವಲಯಗಳ ಕಚೇರಿಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ದೂರು ಸಮಿತಿಗೆ ಸ್ಪಷ್ಟ ಮಾರ್ಗಸೂಚಿ ನೀಡಲು ಹಾಗೂ ಮಹಿಳಾ ಕಾನೂನುಗಳ ದುರುಪಯೋಗ ತಡೆಯಲು ಸಮಿತಿ ರಚಿಸಲು ಚಿಂತಿಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಹೇಳಿದರು. ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಶನಿವಾರ ಭೇಟಿ ನೀಡಿ ಮಹಿಳಾ ಕೈದಿಗಳ ಸಮಸ್ಯೆ ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯನ್ನು ಮಹಿಳಾ ಸಹೋದ್ಯೋಗಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ವ್ಯಾಪಕ ದೂರು ಬಂದಿವೆ. ಅಲ್ಲದೆ, ಕಾನೂನು ಮಾರ್ಪಾಡಿಗೆ ಹಲವು ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಿತಿ ಯಾವ ರೀತಿ ದೂರುಗಳನ್ನು ಸ್ವೀಕರಿಸಬೇಕು, ವಿಚಾರಣೆ ನಡೆಸಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲು ಸಮಿತಿ ರಚಿಸಲು ಚಿಂತಿಸಲಾಗಿದೆ ಎಂದರು. ಸಚಿವ ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗುತ್ತಿದೆ. ಬುದ್ಧಿಜೀವಿಗಳು, ತಜ್ಞರು, ಆಯೋಗ ಒಳಗೊಂಡಂತೆ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.