ರೋಟರಿಯ ಸೇವಾ ಕಾರ್ಯಗಳು ವಿಸ್ತರಣೆಯಾಗಲಿ: ಸಿದ್ದಾರ್ಥ
ಟಿ. ನರಸೀಪುರ: ರೋಟರಿ ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದ ಜನರಿಗೆ ವಿಸ್ತರಣೆಯಾಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ ಹೇಳಿದರು.
ಪಟ್ಟಣದ ಸವಿತಾ ಸಮಾಜದ ಭವನದಲ್ಲಿ ರೋಟರಿ ಸಂಸ್ಥೆ ಏರ್ಪಡಿಸಿದ್ದ ದಾಸೋಹ ಶಿಬಿರದಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆಯ ಕಾರ್ಯಕ್ರಮಗಳು ಪಟ್ಟಣದ ಪ್ರದೇಶದಲ್ಲಿಯೇ ಹೆಚ್ಚಾಗಿ ನಡೆಯುತ್ತಿದ್ದು, ಗ್ರಾಮೀಣ ಜನರನ್ನು ತಲುಪಲು ಹಳ್ಳಿಗಳಲ್ಲಿ ಸೇವಾ ಕಾರ್ಯಗಳನ್ನು ನಡೆಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಪಪಂ ಸದಸ್ಯ ಟಿ.ಜಿ. ಪುಟ್ಟಸ್ವಾಮಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿನಾಯಕ ಕಾಲೋನಿಯ ಮಕ್ಕಳು ಹಾಗೂ ಸಾರ್ವಜನಿಕರಿಗೆ ದಾಸೋಹ ಶಿಬಿರ ಏರ್ಪಡಿಸಲಾಗಿತ್ತು. ರೋಟರಿ ಮಾಜಿ ಅಧ್ಯಕ್ಷೆ ಜಯಶೀಲ, ಕೇಬಲ್ ರಾಜಶೇಖರ, ರಾಕೇಶ್ ಸಿದ್ದರಾಮಯ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ, ವೈದ್ಯ ಡಾ. ರವಿಶಂಕರ್, ವಕೀಲ ಜ್ಞಾನೇಂದ್ರಮೂರ್ತಿ, ಸವಿತಾ ಸಂಘದ ಖಜಾಂಚಿ ನಾಗರಾಜು, ಮುಖಂಡ ಹಾಲಿನ ನಾಗರಾಜು ಇದ್ದರು.