ಕೃತಿಚೌರ್ಯ ತಡೆಗೆ ಕಾರ್ಯಾಗಾರ
ಮೈಸೂರು: ನಗರದ ಎಸ್ಡಿಎಂ- ಐಎಂಡಿ ಸಂಸ್ಥೆಯಲ್ಲಿ ಕೃತಿಚೌರ್ಯ ತಡೆಗಟ್ಟುವ ಬಗ್ಗೆ ಎರಡು ದಿನಗಳ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾರ್ಯಾಗಾರದ ಸಂಚಾಲಕ ಡಾ.ಎಂ.ವಿ. ಸುನಿಲ್ ಮಾತನಾಡಿ, ಕೃತಿಚೌರ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಮತ್ತು ಶೈಕ್ಷಣಿಕ ಸಮಗ್ರತೆ ಕಾಪಾಡುವುದು ಶಿಕ್ಷಕರ ಜವಾಬ್ದಾರಿ ಎಂದು ಹೇಳಿದರು. ಪ್ರಮುಖ ಭಾಷಣಕಾರ ಡಾ.ಆರ್.ಜಗದೀಶ್ ಮಾತನಾಡಿ, ಸಂಶೋಧನೆಯ ಗುಣಮಟ್ಟದ ಬಗ್ಗೆ ಗಮನ ನೀಡಬೇಕು. ಕೃತಿಚೌರ್ಯ ತಡೆಗಟ್ಟುವ ವಿಧಾನಗಳನ್ನು ಶಿಕ್ಷಕ ವರ್ಗದವರು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಉಚಿತವಾಗಿ ದೊರೆಯುವ ತಂತ್ರಾಂಶಗಳನ್ನು ಉಪಯೋಗಿಸುವ ಕೌಶಲ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಉಳಿದಂತೆ ಭಾಷಣಕಾರ ಡಾ.ಸಿ.ಪಿ.ರಾಮಶೇಷ್ ಕೃತಿಚೌರ್ಯದ ಬಗ್ಗೆ ಒಂದು ನೋಟ ವಿಷಯದ ಬಗ್ಗೆ, ಆನಂದ್ ಬೈರಪ್ಪ ಅವರು ಬೌದ್ಧಿಕ ಆಸ್ತಿ ಹಕ್ಕು ಬಗ್ಗೆ ಉಪನ್ಯಾಸ ನೀಡಿದರು. ಇದಕ್ಕೂ ಮೊದಲು ಸಂಸ್ಥೆಯ ಉಪ ನಿರ್ದೇಶಕಿ ಡಾ.ಗಾಯತ್ರಿ ಕಾರ್ಯಾಗಾರ ಉದ್ಘಾಟಿಸಿದರು. ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ನೀಲಂಜನ್ ಸೇನ್ ಗುಪ್ತ ಅತಿಥಿಯಾಗಿದ್ದರು. ಎಂಜಿನಿಯರಿಂಗ್, ವೈದ್ಯಕೀಯ, ಆಯುರ್ವೇದ, ಆಡಳಿತ, ಗ್ರಂಥಾಲಯ ವಿಜ್ಞಾನ, ದಂತ ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಪ್ರತಿಭಾ ಪುರಸ್ಕಾರ
ಮೈಸೂರು: ಕಾಳಿಕಾಂಬ ಕಮಠೇಶ್ವರ ಸ್ವಾಮಿಯವರ ದೇವಾಲಯದ ವತಿಯಿಂದ ದಿ. ಎಂ.ಆರ್. ರಘುರಾಂ ಸ್ಮರಣಾರ್ಥ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗಳಿಸಿದ ವಿಶ್ವಕರ್ಮ ಜನಾಂಗದ ವಿದ್ಯಾರ್ಥಿಗಳಿಗೆ ಜು.19 ರಂದು ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಿದ್ದು, ಆಸಕ್ತರು ಜು.10 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಅಧ್ಯಕ್ಷ ಕೆ.ನಾಗರಾಜು ತಿಳಿಸಿದ್ದಾರೆ. ಮೊ. 98457 73258 ಸಂಪರ್ಕಿಸಬಹುದು. ಒಕ್ಕಲಿಗರ ಸಂಘವು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಜನಾಂಗದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದ್ದು, ಅರ್ಹ ವಿದ್ಯಾರ್ಥಿಗಳು ಆ. 9 ರೊಳಗೆ ಸ್ವ ವಿವರವುಳ್ಳ ಅರ್ಜಿಯನ್ನು ಸಂಘದ ಕಚೇರಿಯಲ್ಲಿ ಸಲ್ಲಿಸಬಹುದು. ಮೊ. 96324 10744 ಸಂಪರ್ಕಿಸಬಹುದು.
ಸಿಇಟಿ ತರಬೇತಿ
ಮೈಸೂರು: ಮೈಸೂರ್ ಸ್ಕೂಲ್ ಆಫ್ ನರ್ಸಿಂಗ್ನಲ್ಲಿ ಎಸ್ಬಿಐ, ರೀಜನಲ್ ರೂರಲ್ ಬ್ಯಾಂಕ್ನ ಕ್ಲರಿಕಲ್ ಮತ್ತು ಪ್ರೊಬೆಷನರಿ ಆಫೀಸರ್ಸ್ ಪರೀಕ್ಷೆಗಳಿಗೆ ತರಬೇತಿ ನೀಡಲಿದ್ದು, ಆಸಕ್ತರು ಜು.10 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 99162 53406 ಸಂಪರ್ಕಿಸಬಹುದು. ನವೋದಯ ಫೌಂಡೇಷನ್ನಲ್ಲಿ ಮೈಸೂರು ವಿವಿ ನಡೆಸುವ ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ (ಕೆ- ಸ್ಲೆಟ್) ತರಬೇತಿ ನೀಡಲಿದ್ದು, ಆಸಕ್ತರು ಜು.9 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 78490 15566 ಸಂಪರ್ಕಿಸಬಹುದು.
ಪ್ರತಿಭಟನೆ ಇಂದು
ಮೈಸೂರು: ಬಳ್ಳಾರಿಯ ಕೂಡಗಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಮೈಸೂರು ಕನ್ನಡ ವೇದಿಕೆಯು ಜು.7ರ ಬೆಳಗ್ಗೆ 11ಕ್ಕೆ ಕಾಡಾ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ.