ಕೊಂಕಣ ಸುತ್ತಿ ಮೈಲಾರಕ್ಕೆ
ಮೈಸೂರಿನ ಸಂಚಾರಿ ಪೊಲೀಸ್ ವಿಭಾಗದಲ್ಲಿ ನಗರದ ಪೊಲೀಸ್ ಆಯುಕ್ತರಾದ ಡಾ. ಸಲೀಂ ಅವರು ಕೈಗೊಂಡ ಹಲವಾರು ಜನಪರ ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ಅನುಕೂಲವನ್ನುಂಟು ಮಾಡಿವೆ ನಿಜ. ಆದರೆ ನಗರ ಸಾರಿಗೆ ಬಸ್ಗಳು, ಹೆಬ್ಬಾಳಿನಿಂದ ಸಿಟಿ ಬಸ್ ನಿಲ್ದಾಣಕ್ಕೆ ತೆರಳುವಾಗ, ಇರ್ವಿನ್ ರಸ್ತೆಯ ಇಕ್ಕಟ್ಟನ್ನು ಮನಸಿನಲ್ಲಿ ಹೊಂದಿ, ಸಾಹೇಬರು ಅದನ್ನು ಬಸ್ ಸಂಚಾರಕ್ಕೆ ಮಾತ್ರ, ಏಕಮುಖ ಸಂಚಾರದ ರಸ್ತೆಯನ್ನಾಗಿ ಪರಿವರ್ತಿಸಿದ್ದಾರೆ. ಅತ್ತ ಬಸ್ಗಳು ಸಿಟಿ ಬಸ್ ನಿಲ್ದಾಣದೆಡೆಗೆ ಹೋಗುವಾಗ, ಅದು ಕೆ.ಆರ್. ಆಸ್ಪತ್ರೆಯ ಬಳಿ ಬಲದ ತಿರುವು ತೆಗೆದುಕೊಂಡು, ನಂತರ ಡಾ.ರಾಜೇಂದ್ರ ಪ್ರಸಾದ್ ರಸ್ತೆ ಮೂಲಕ, ಗಾಂಧಿ ಚೌಕದ ಕಡೆಗೆ ತಿರುಗಿ, ನಂತರ ಸಬರ್ಬ್ ಬಸ್ ಸ್ಟಾಂಡ್ ಮೂಲಕ ಬೇರೆ ಊರುಗಳಿಗೆ ತೆರಳುವ ಜನರಿಗೆ, ಅನುಕೂಲ ಕಲ್ಪಿಸುವ ಸಲುವಾಗಿ ಇಲ್ಲಿ ದೊಡ್ಡ ಗಡಿಯಾರ ವೃತ್ತದಲ್ಲಿ ಸಿಟಿ ಬಸ್ಗೆ ನಿಲುಗಡೆ ನೀಡಲು ಆರಂಭಿಸಿದ್ದಾರೆ. ಯಾತ್ರಿಕರಾದ ನಮಗೆ ಅನುಕೂಲಕ್ಕಿಂತ, ಹೆಚ್ಚು ಅನಾನುಕೂಲ ಮಾಡಿದೆ. ಉದಾಹರಣೆಗೆ ದೊಡ್ಡ ಗಡಿಯಾರದಲ್ಲಿ ಇಳಿದು, ನಾವು ಲಗೇಜ್ನೊಡನೆ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳುವುದು, ಇತ್ತ ನಡೆದು ಹೋಗುವ ದೂರವೂ ಅಲ್ಲ ಅತ್ತ ಆಟೋದಲ್ಲಿ ಪಯಣಿಸುವ ದೂರವೂ ಅಲ್ಲ. ಹಾಗೆ ನೋಡಿದರೆ ಮೊದಲು ಇರ್ವಿನ್ ರಸ್ತೆಯ ಮುಖಾಂತರ ಸಿಟಿ ಬಸ್ ಸಂಚರಿಸಿ, ಕೇಂದ್ರೀಯ ಅಂಚೆ ಕಚೇರಿ ಬಳಿ ನಿಲುಗಡೆ ನೀಡುತ್ತಿದ್ದ ಕ್ರಮ ಎಷ್ಟೋ ಚೆನ್ನಾಗಿತ್ತು. ಒಟ್ಟಿನಲ್ಲಿ ಈ ವ್ಯವಸ್ಥೆಯ ಕೆಲ ತಪ್ಪು ನಿರ್ಧಾರಗಳು, ಜನರಿಗೆ ಮತ್ತೂ ಕಷ್ಟವಾಗಿ ಪರಿಣಮಿಸಿ, ನಾವೆಲ್ಲರೂ ಆಯುಕ್ತರ ಈ ನಿರ್ಧಾರವನ್ನು ಹಲವಾರು ಬಾರಿ ಶಪಿಸಿದುದ್ದಿದೆ. ಹಾಗಾಗಿ ಡಾ.ಸಲೀಂ ಸಾಹೇಬರು, ಇರ್ವಿನ್ ರೋಡ್ನ ಸಂಚಾರ ತುಸು ಕಷ್ಟವೆನಿಸಿದರೂ ಪರವಾಗಿಲ್ಲ, ನಮಗೆ ಹಳೆಯ ಬಸ್ ರೂಟ್ ಅದರಲ್ಲೂ ಪರಸ್ಥಳಕ್ಕೆ ಹೋಗುವವರಿಗೆ ಬಹಳ ಅನುಕೂಲಕರವಾಗಿತ್ತು. ಆದ ಕಾರಣ, ಮೇಲಿನ ಬಸ್ ರೂಟ್ ಅನ್ನು, ಆಯುಕ್ತರು ಹಳೆ ರೀತಿಯಲ್ಲಿಯೇ ಮುಂದುವರಿಸಿ, ಜನರ ಪ್ರೀತಿ ವಿಶ್ವಾಸಗಳನ್ನು ಮತ್ತೆ ಸಂಪಾದಿಸುವರೆಂದು ಆಶಿಸೋಣವೇ
ಟಿ ನಾಗಮಂಗಲ ನರಸಿಂಹಮೂರ್ತಿ, ವಿಜಯನಗರ ರೇಲ್ವೆ ಬಡಾವಣೆ