ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡಿ
ಮೈಸೂರು: ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಮರಗಳ ಜೊತೆಗೆ ವನ್ಯಜೀವಿಗಳ ಸಂರಕ್ಷಣೆಯ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ಎನ್.ಅಜಯ್ ನಾಗಭೂಷಣ್ ಹೇಳಿದರು.
ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾನುವಾರ ಯುವ ಸಂಘಟನೆ- 2014 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಕೋರಿಯಾದಲ್ಲಿ ನಶಿಸಿ ಹೋಗಿದ್ದ ಕೆಲವೆ ಜಾತಿಯ ಮರಗಳನ್ನು ಅಲ್ಪಾವಧಿಯಲ್ಲಿ ಬೆಳೆಸಿದೆ. ಆದರೆ ಅಲ್ಲಿ ವನ್ಯಜೀವಿಗಳ ಕೊರತೆ ಎದ್ದು ಕಾಣುತ್ತದೆ. ನಾಶವಾದ ಪ್ರಾಣಿ, ಪಕ್ಷಿಗಳನ್ನು ಬೇರೆಡೆಯಿಂದ ತರಲು ಸಾಧ್ಯವಿಲ್ಲ. ಆದ್ದರಿಂದ ಅವುಗಳ ಮಹತ್ವ ಅರಿತು ಸಂರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಾವು ಮೊದಲು ಅನುಕೂಲ ಸಿಂಧು ಹಾಗೂ ಅಲ್ಪಾವಧಿಯ ಆಲೋಚನೆ ಹೊಂದಿದ್ದೇವೆ. ಆದ್ದರಿಂದ ಪರಿಸರ ಸಂರಕ್ಷಣೆ ವಿಷಯ ನಮ್ಮಲ್ಲಿ ಮೂಲೆ ಗುಂಪಾಗುತ್ತಿವೆ. ಭಾರತದಲ್ಲಿನ ಹುಲಿ, ಆನೆ ಸೇರಿದಂತೆ ಅನೇಕ ಪ್ರಾಣಿ, ಪಕ್ಷಿಗಳು ವಿಶ್ವದಲ್ಲಿ ಬೇರೆಲ್ಲಿಯೂ ಸಿಗುವುದಿಲ್ಲ ಎಂದರು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಕಾರ್ಯದರ್ಶಿ ಆರ್.ಎಸ್. ಸುರೇಶ್ ಮಾತನಾಡಿ, ನಗರ ಪಾಲಿಕೆ ಕಾರಂಜಿಕೆರೆ ಬಳಿ ನಿರ್ಮಿಸಿರುವ ಮತ್ಸ್ಯಾಲಯವನ್ನು ಮೃಗಾಲಯ ತನ್ನ ವ್ಯಾಪ್ತಿಗೆ ಪಡೆಯಬೇಕು. ಆಗ ಮೃಗಾಲಯದ ಆಕರ್ಷಣೆ ಮತ್ತಷ್ಟು ಹೆಚ್ಚಲಿದೆ ಎಂದು ಸಲಹೆ ನೀಡಿದರು. ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪಶುವೈದ್ಯ ಡಾ. ಸುರೇಶ್ ಇದ್ದರು.