ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಾಹಿತ್ಯಕ್ಕೆ ಸಾಮಾಜಿಕ ಹೊಣೆ ಹೆಚ್ಚು

Rashmi Kasaragodu
Updated On : 7 Jul 2014, 1:47 am

ಮೈಸೂರು: ಸಾಹಿತ್ಯಕ್ಕೆ ಸಾಮಾಜಿಕ ಜವಾಬ್ದಾರಿ ಇದೆ. ಸಾಹಿತಿಗಳು ಸಮಾಜದ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ ಮಾರ್ಗದರ್ಶನ ನೀಡಬೇಕು ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿ ಹಾಗೂ ಸಾಹಿತಿ ಡಾ.ಧರಣಿದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು.
ಕರ್ನಾಟಕ ಕಾವಲು ಪಡೆ ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್ ವತಿಯಿಂದ ಭಾನುವಾರ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಮೋದೂರು ತೇಜ ಅವರ ಅರ್ಧಕ್ಕೆ ನಿಂತ ಚಿತ್ರ ಎಂಬ ಕಥಾ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಾಜದ ಒಂದು ಭಾಗವಾದ ನಾವು ವಾಸ್ತವತೆ ಸ್ವೀಕರಿಸಬೇಕು. ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಲೋಪದೋಷಗಳನ್ನು ತಿದ್ದಬೇಕು. ಸಾಹಿತ್ಯವನ್ನು ಸಮಾಜ ಕಟ್ಟುವುದಕ್ಕಾಗಿ ಬಳಸಿಕೊಳ್ಳಬೇಕು. ಸಾಹಿತ್ಯದ ಭಾಷೆಗೆ ತನ್ನದೇ ಆದ ಶಕ್ತಿ ಇದೆ. ಕಳೆದೆರಡು ದಶಕದಿಂದ ಈಚೆಗೆ ಸಾಹಿತ್ಯದ ಹೊಳವುಗಳು ಬದಲಾಗಿವೆ. ದಲಿತ, ಅಲ್ಪಸಂಖ್ಯಾತ ಹಾಗೂ ಮಹಿಳಾ ಪರವಾದ ಸಾಹಿತ್ಯ ಪ್ರವರ್ಧಮಾನಕ್ಕೆ ಬಂದಿವೆ. ಹೆಚ್ಚಿನ ಸಾಹಿತಿಗಳು ಸಮಯದ ದೃಷ್ಟಿಯಿಂದ ಕಾವ್ಯಗಳನ್ನು ರಚಿಸುತ್ತಾರೆ. ಕಥೆ ರಚಿಸಲು ಮುಂದಾಗುವುದಿಲ್ಲ. ನಾನು 1991 ರಿಂದ ಕಥೆ ಬರೆಯಲು ಆರಂಭಿಸಿದ್ದು. ಆದರೆ ಇನ್ನೂ 10 ರಿಂದ 12 ಕೃತಿಗಳು ಪ್ರಕಟಗೊಂಡಿಲ್ಲ ಎಂದರು. ಮೋದೂರು ತೇಜ ಅವರು ಉದಯೋನ್ಮುಖ ಸಾಹಿತಿಯಲ್ಲ. ಬದಲಾಗಿ ಅನುಭವಸ್ಥ ಸಾಹಿತಿ. ಅವರ ಸಾಹಿತ್ಯ ಕೃಷಿಗೆ ಯಾವುದೇ ಹೊಗಳಿಕೆಯ ರಿಯಾಯಿತಿ ಬೇಡ ಎಂಬುದು ನನ್ನ ಅಭಿಪ್ರಾಯ. ಅವರ ಸಾಹಿತ್ಯದ ದೃಷ್ಟಿಕೋನ ನೋಡಿದರೆ ನಾವೇ ಏನನ್ನಾದರು ಮಾತನಾಡಬೇಕು ಎನಿಸುತ್ತದೆ. ಅರ್ಧಕ್ಕೆ ನಿಂತ ಚಿತ್ರ ಕೃತಿಯಲ್ಲಿ ಮಹಿಳೆಯ ಅಂತಃಕರಣವನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅವರ ಕಥೆ ಓದಿದರೆ ಮಹಿಳೆಯೇ ಬರೆದಿರಬೇಕು ಎಂಬ ಅನುಮಾನ ಮೂಡುತ್ತದೆ. ಅಷ್ಟರ ಮಟ್ಟಿಗೆ ಮಹಿಳೆಯರ ಕಷ್ಟಗಳನ್ನು ವಿಶಿಷ್ಟ ಶೈಲಿಯಲ್ಲಿ ಕಟ್ಟಿಕೊಟ್ಟು ಕೊನೆಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬ ಆಶಾವಾದವನ್ನು ಹುಟ್ಟು ಹಾಕಿದ್ದಾರೆ ಎಂದು ತಿಳಿಸಿದರು. ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕೃತಿ ಕುರಿತು ಮಾತನಾಡಿದರು. ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕೃತಿಕಾರ ಮೋದೂರು ತೇಜ, ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಎಂ. ಮೋಹನ್ಕುಮಾರ್ಗೌಡ, ಸ್ಪಂದನ ಪರಿಷತ್ತಿನ ಟಿ. ಸತೀಶ್ ಜವರೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement