ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಿರಿಯ ನಾಗರಿಕರ ಆರೋಗ್ಯ ತಪಾಸಣೆ

Rashmi Kasaragodu
Updated On : 7 Jul 2014, 1:52 am

ಮೈಸೂರು: ನಗರದ ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಭಯ ಯೋಜನೆಯ ಹಿರಿಯ ನಾಗರಿಕರಿಗಾಗಿ ಭಾನುವಾರ ವೈದ್ಯಕೀಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿರುವ ಕಾವೇರಿ ಕಾಲೇಜಿನಲ್ಲಿ ಅಶೋಕಪುರಂ ಠಾಣೆ ನಾಗರಿಕ ಸಲಹಾ ಸಮಿತಿಯು ಈ ಶಿಬಿರ ಆಯೋಜಿಸಿತ್ತು. ಜೆಎಸ್ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ತಂಡವು, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಕಣ್ಣು, ಕಿವಿ-ಮೂಗು-ಗಂಟಲು (ಇಎನ್ಟಿ) ಹಾಗೂ ಮೂಳೆ ತಪಾಸಣೆ ನಡೆಸಿದರು. ಜೆಎಸ್ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನುರಿತ ವೈದ್ಯರಾದ ಡಾ.ಗುರುಪ್ರಸಾದ್, ಡಾ.ವಿಜಯ್, ಡಾ.ಕಿರಣ್, ಡಾ.ಪ್ರತೀಕ್, ಡಾ.ಅನಿತಾ ಡಿ.ಗಿರೀಶ್, ಡಾ.ರೋಹಿತ್, ಡಾ.ಶಶಿಧರ್ ಹಾಗೂ ಇತರೆ ವೈದ್ಯರ ಹಿರಿಯ ನಾಗರಿಕರಿಗೆ ವೈದ್ಯಕೀಯ ತಪಾಸಣೆ ಮಾಡಿದರು. ಅಶೋಕಪುರಂ ಠಾಣೆ ವ್ಯಾಪ್ತಿಯ ಪೌರಕಾರ್ಮಿಕರ ಕಾಲೋನಿ, ಅಶೋಕಪುರಂ, ಜಯನಗರ, ಅರವಿಂದನಗರ, ಶ್ರೀರಾಂಪುರ, ಎಸ್ಬಿಎಂ ಲೇಔಟ್, ಶ್ರೀರಾಂಪುರ 2ನೇ ಹಂತ- ನಾಯ್ಡುಸ್ಟೋರ್ ಪ್ರದೇಶ, ಶ್ರೀರಾಂಪುರ 3ನೇ ಹಂತ ಹಾಗೂ ಕೆ.ಆರ್.ವನಂ ಪ್ರದೇಶದಲ್ಲಿ ವಾಸವಿದ್ದು, ಅಭಯ ಯೋಜನೆಯಲ್ಲಿ ಗುರುತಿಸಿಕೊಂಡಿರುವ ಹಿರಿಯ ನಾಗರಿಕರು ವೈದ್ಯಕೀಯ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎ.ಎನ್.ರಾಜಣ್ಣ ಉದ್ಘಾಟಿಸಿದರು. ಉಪ ಮೇಯರ್ ವಿ.ಶೈಲೇಂದ್ರ, ಕೆ.ಆರ್. ಉಪ ವಿಭಾಗದ ಎಸಿಪಿ ಬಿ.ಟಿ.ಕವಿತಾ, ಅಶೋಕಪುರಂ ಠಾಣೆಯ ಇನ್ಸ್ಪೆಕ್ಟರ್ ಶಾಂತಮಲ್ಲಪ್ಪ, ನಾಗರಿಕ ಸಮಿತಿಯ ಸದಸ್ಯರಾದ ವೆಂಕಟರಾಮು ಕಶ್ಯಪ್, ಗುರುರಾಜ, ವಿಕ್ರಾಂತ್ ಪಿ. ದೇವೇಗೌಡ, ರಘುರಾಮ್ ಇದ್ದರು.
ಮರ ಬಿದ್ದು ಕಾರು ಜಖಂ
ಮೈಸೂರು: ಬೃಹತ್ ಮರ ಬಿದ್ದು ಕಾರೊಂದು ಜಖಂ ಆಗಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಸರಸ್ವತಿಪುರಂ ಸರ್ಕಾರಿ ಮುದ್ರಣಾಲಯದ ಎದುರು ಯಾದವಗಿರಿ ನಿವಾಸಿ ರಮೇಶ್ ಎಂಬವರು ಕಾರು ಮರ ಬಿದ್ದು ಜಖಂಗೊಂಡಿದೆ. ಇದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಾರ್ವಜನಿಕರ ಮರದ ಕೊಂಬೆಗಳನ್ನು ಕಡಿದುಕೊಂಡು ಸಾಗಿಸಿದರು. ಮುದ್ರಣಾಲಯದ ಪಕ್ಕದಲ್ಲಿ ರಮ್ಯಾ ಹೊಟೇಲ್ನ ಮಾಲೀಕರಾದ ರಮೇಶ್, ಎಂದಿನಂತೆ ಮರದ ಕೆಳಗೆ ಕಾರು ನಿಲ್ಲಿಸಿ ಹೊಟೇಲ್ಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಶನಿವಾರ ಸಂಜೆ ಸುರಿದ ಜೋರು ಮಳೆಯಿಂದಾಗಿ ಕಾಂಡ ಕೊರೆದು ಒಣಗಿದ್ದ ಮರ, ಮಳೆ ನೀರಿನ ತೇವಾಂಶದಿಂದ ಬುಡ ಸಮೇತ ನೆಲಕ್ಕೆ ಉರುಳಿ ಬಿದ್ದಿದೆ.
ಲಾರಿ ಅಪಘಾತ: ಮೂವರು ಪಾರು
ಮೈಸೂರು: ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಲಾರಿ ಮಗುಚಿ ಬಿದ್ದಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನ್ಯೂ ಕಾಂತರಾಜ್ ಅರಸ್ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಜನತಾ ನಗರದ ನಿವಾಸಿ ಪ್ರಕಾಶ್, ನಂಜನಗೂಡು ತಾಲೂಕು ನೇರಳೆ ಗ್ರಾಮದ ಚಾಲಕ ಅಜ್ಜಪ್ಪ ಮತ್ತು ಪುಟ್ಟಬುದ್ಧಿ ಪ್ರಾಣಾಪಾಯದಿಂದ ಪಾರಾದವರು. ಕೆ.ಜಿ.ಕೊಪ್ಪಲು ಕಡೆಯಿಂದ ಅಪೋಲೋ ಆಸ್ಪತ್ರೆ ಕಡೆಗೆ ಬರುತ್ತಿದ್ದಾಗ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದಿದೆ. ಈ ಸಂಬಂಧ ಕೆ.ಆರ್. ಸಂಚಾರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಂಘಟಿತ ಹೋರಾಟಕ್ಕೆ ಕರೆ
ಮೈಸೂರು: ಮಹಿಳೆಯರ ಮೇಲೆ ಇತ್ತೀಚೆಗೆ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮಹಿಳೆಯರು ಅಂತಹ ದುಷ್ಟಶಕ್ತಿಗಳ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಜಿಪಂ ಹಂಗಾಮಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಕರೆ ನೀಡಿದರು. ಮೈಸೂರು ತಾಲೂಕಿನ ಶ್ರೀರಾಂಪುರ ಗ್ರಾಪಂ ವತಿಯಿಂದ ಶ್ರೀರಾಂಪುರದ ಅಶ್ವಿನಿ ಕಲ್ಯಾಣಮಂಟದಲ್ಲಿ ನಡೆದ ಮಹಿಳೆಯರಿಗಾಗಿ ವಿಶೇಷ ಗ್ರಾಮ ಸಭೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಮಹಿಳೆಯರಿಗಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡು, ಮಹಿಳೆ ಅಬಲೆಯಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾರಿದೆ ಎಂದರು. ಜಿಪಂ ಸದಸ್ಯ ಜವರೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎನ್.ಆರ್. ವಿಜಯ್ ಮಾತನಾಡಿದರು. ತಾಪಂ ಸದಸ್ಯೆ ವಿಜಯಲಕ್ಷ್ಮಿ, ಅಶ್ವಿನಿ ರೇವಣ್ಣ, ರೇಣುಕಾ ನಾಗೇಶ್ ಬಿಲ್ವಾ, ಗ್ರಾಪಂ ಉಪಾಧ್ಯಕ್ಷ ಮಹಾದೇವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement