ರೈತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಮೈಸೂರು: ಬಿಜಾಪುರ ಜಿಲ್ಲೆ ಕೂಡಗಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ನಗರದ ಕಾಡಾ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು. ಕೂಡಗಿ ಕೃಷಿ ಕ್ಷೇತ್ರಕ್ಕೆ ಹೆಸರುವಾಸಿಯಾಗಿದ್ದು, ಅಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ಹೊರಟಿರುವುದು ಅವೈಜ್ಞಾನಿಕ. ವಿದ್ಯುತ್ ಬೇಕು ಎಂಬುದಕ್ಕಾಗಿ ರೈತರ ಹೊಟ್ಟೆ ಮೇಲೆ ಹೊಡೆದು ಜಮೀನು ಕಬಳಿಸುವುದು, ಆ ಜಾಗದಲ್ಲಿ ವಿದ್ಯುತ್ ಉತ್ಪಾದಿಸಿ ನಗರ ಮತ್ತು ಕೈಗಾರಿಕೆಗಳಿಗೆ ಪೂರೈಸುವುದು ರೈತ ವಿರೋಧಿ ಧೋರಣೆ ಆಗಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಭಾಯಿಸಲು ವಿಫಲರಾಗಿರುವ ಗೃಹ ಮಂತ್ರಿ ಕೆ.ಜೆ. ಜಾರ್ಜ್ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕು. ಕೂಡಗಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ಕೈಬಿಟ್ಟು, ರೈತರಿಗೆ ಜಮೀನು ವಾಪಸ್ ನೀಡಬೇಕು. ಈ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಸುರೇಶಬಾಬು, ಮಹದೇವಸ್ವಾಮಿ, ಗೋಪಿ, ಬಾಬು, ಪ್ರಕಾಶ್, ಅರವಿಂದ ಶರ್ಮ, ಕುಮಾರ, ಭಾನುಮೋಹನ್, ಬೋಗಾದಿ ಸಿದ್ದೇಗೌಡ, ಗುರು, ಜಯಂತ ವಿ. ಗೌಡ, ಚಂದ್ರ, ಅರವಿಂದ, ಯೋಗೇಶ್, ಮಹದೇವ್, ಗಿರೀಶ್, ನಾಗರಾಜ್, ಚಿಣ್ಣಪ್ಪ, ಅಭಿ, ಸಾಗರ್, ಶಿವಮೂರ್ತಿ, ರಾಘವೇಂದ್ರ, ಕಾರ್ತಿಕ್, ಪವನ್ ಇದ್ದರು.