ಕಾರ್ಮಿಕರಿಂದ ಜೈವಿಕ ತ್ಯಾಜ್ಯ ವಿಲೇವಾರಿ ಸಲ್ಲದು
ಮೈಸೂರು: ಮಕ್ಕಳ ಡೈಪರ್ ಪ್ಯಾಡ್ ಮತ್ತು ಹೆಣ್ಣು ಮಕ್ಕಳ ಸ್ಯಾನಿಟರಿ ಪ್ಯಾಡ್ಗಳನ್ನು ಪೌರ ಕಾರ್ಮಿಕರಿಂದ ವಿಲೇವಾರಿ ಮಾಡಿಸುವುದು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿ ದೂರಿದೆ. ಡೈಪರ್ ಪ್ಯಾಡ್ಗಳಲ್ಲಿ ಮಲ ಮತ್ತು ಸ್ಯಾನಿಟರಿ ಪ್ಯಾಡ್ಗಳಲ್ಲಿ ಸಾಮಾನ್ಯವಾಗಿ ರಕ್ತ ಇರುತ್ತದೆ. ಇವು ವೈದ್ಯಕೀಯ ಮತ್ತು ಜೈವಿಕ ತ್ಯಾಜ್ಯ. ಇಂತಹ ವಸ್ತುಗಳನ್ನು ಹೇಗೆ ವಿಲೇವಾರಿ ಅಥವಾ ನಾಶ ಮಾಡಬೇಕು ಎಂಬುದನ್ನು ಅವುಗಳ ತಯಾರಿಕ ಕಂಪನಿಗಳು ಗ್ರಾಹಕರಲ್ಲಿ ಅರಿವು ಮೂಡಿಸುವುದಿಲ್ಲ. ಆದ್ದರಿಂದ ಪೌರ ಕಾರ್ಮಿಕರು ಇಂತಹ ತ್ಯಾಜ್ಯವನ್ನು ಅವೈಜ್ಞಾನಿಕ ರೀತಿಯಲ್ಲಿ ತೆಗೆಯುತ್ತಿದ್ದಾರೆ. ಇದರಿಂದಾಗಿ ಪೌರ ಕಾರ್ಮಿಕರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಿ ಟೈಪೈಡ್, ಡೈಯೇರಿಯಾ ಹಾಗೂ ಇತರೆ ಕಾಯಿಲೆ ಬರುತ್ತಿದೆ. ಇದು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ ಆಗಿರುವುದರಿಂದ, ಮಾನವ ಹಕ್ಕುಗಳ ಆಯೋಗವು ಈ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು, ಸಂಬಂಧಿಸಿದ ಸ್ಥಳೀಯ ಸಂಸ್ಥೆಗೆ ನೋಟಿಸ್ ನೀಡಿ ತ್ಯಾಜ್ಯ ವಿಲೇವಾರಿಗೆ ಮಾರ್ಗಸೂಚಿ ಕಂಡುಹಿಡಿಯಬೇಕು. ಇಂತಹ ಜೈವಿಕ ತ್ಯಾಜ್ಯಗಳ ವಿಲೇವಾರಿ ಘಟಕ ತೆರೆಯಬೇಕು ಎಂದು ಸಂಸ್ಥೆಯ ಅಧ್ಯಕ್ಷ ಎ.ಎಂ.ಭಾಸ್ಕರ್ ಮತ್ತು ಕಾರ್ಯದರ್ಶಿ ಸೇಸುನಾಥನ್ ಆಗ್ರಹಿಸಿದ್ದಾರೆ.