ಮೈಸೂರಲ್ಲಿ ಚಿಟ್ಟಾಣಿ ಯಕ್ಷೋತ್ಸವ 11ಕ್ಕೆ
ಮೈಸೂರು: ನಗರದ ಇನ್ನೋವೇಟಿವ್ ಸಂಸ್ಥೆ ದಶಮಾನೋತ್ಸವದ ಸವಿನೆನಪಿಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜು.11 ರಿಂದ 13ರವರೆಗೆ ನಗರದ ಜಗನ್ಮೋಹನ ಅರಮನೆಯಲ್ಲಿ ಚಿಟ್ಟಾಣಿ ಯಕ್ಷೋತ್ಸವ ಏರ್ಪಡಿಸಲಾಗಿದೆ.
ಜು.11ರ ಸಂಜೆ 5.30ಕ್ಕೆ ನಡೆಯುವ ಸಮಾರಂಭವನ್ನು ಸಂಗೀತ ವಿವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಉದ್ಘಾಟಿಸಲಿದ್ದು, ಬೆಳ್ಳಿಪ್ಪಾಡಿ ಯಕ್ಷ- ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ.ಬೆಳ್ಳಿಪ್ಪಾಡಿ ಸತೀಶ್ ರೈ ಅಧ್ಯಕ್ಷತೆ ವಹಿಸುವರು.
ಸಂಜೆ 6ಕ್ಕೆ ಶ್ರೀ ವೀರಾಂಜನೇಯ ಯಕ್ಷ ಮಿತ್ರ ಮಂಡಳಿ ಕಲಾವಿದರು ಭೂ ಕೈಲಾಸ ಯಕ್ಷಗಾನ ಪ್ರದರ್ಶನವಿದೆ. ಜು.12ರ ಸಂಜೆ 4.30ಕ್ಕೆ ಶ್ರೀಕೃಷ್ಣ ಸಂಧಾನ ತಾಳೆಮದ್ದಳೆ ನಡೆಯಲಿದೆ. ನಂತರ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಗ.ನಾ. ಭಟ್ಟ, ಕೆ.ಕೃಷ್ಣಕುಮಾರಾಚಾರ್ಯ ಭಾಗವಹಿಸಲಿದ್ದು, ಚಕ್ರಚಂಡಿಕಾ ಪ್ರದರ್ಶನವಿದೆ.
ಜು.13ರ ಸಂಜೆ 4 ರಂದು ದಮಯಂತಿ ಪುನಃ ಸ್ವಯಂವರ ಎಂಬ ಯಕ್ಷಗಾನ ಪ್ರದರ್ಶನವಿದೆ. ಸಂಜೆ 6ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ.ದೇಜಗೌ ಅವರು ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಚಿಟ್ಟಾಣಿ ಪ್ರಶಸ್ತಿ ಪ್ರದಾನ ಮಾಡುವರು. ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರನ್ನು ಸನ್ಮಾನಿಸಲಾಗುವುದು. ಜಿ.ಎಸ್. ಭಟ್ಟ ಅವರು ರಚಿಸಿರುವ ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ಯಕ್ಷಗಾನ ಸವ್ಯಸಾಚಿ ಎಂಬ ಕೃತಿಯನ್ನು ಸಾಹಿತಿ ಡಾ.ಮಳಲಿ ವಸಂತಕುಮಾರ್ ಲೋಕಾರ್ಪಣೆ ಮಾಡುವರು.
ಸಂವಾದ
ಜು. 13ರ ಬೆಳಗ್ಗೆ 10.30ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ನಗರ ಕಸಾಪ ಕಚೇರಿಯಲ್ಲಿ ಕೆರೆಮನೆ ಶಿವಾನಂದ ಹೆಗಡೆ ಇಡಗುಂಜಿ ಮೇಳದೊಂದಿಗೆ ಸಂವಾದ ನಡೆಸುವರು. ಇನ್ನೋವೇಟಿವ್ ಸಂಸ್ಥೆಯ ಅಧ್ಯಕ್ಷ ಜಿ.ಎಸ್. ಭಟ್ಟ, ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ಅತಿಥಿಗಳಾಗಿ ಭಾಗವಹಿಸುವರು. ಕುಂಬಳೆ ಕಾಸರಗೋಡು ಮಾಸ ಪತ್ರಿಕೆ ಸಂಪಾದಕ ನಾ. ಚಂಬಲ್ತಿಮಾರ್ ವಿಶೇಷ ಉಪನ್ಯಾಸ ನೀಡುವರು.