ವಸತಿ ಶಾಲೆ: ವಿದ್ಯಾರ್ಥಿ ಪೋಷಕರ ಪ್ರತಿಭಟನೆ
ಪಿರಿಯಾಪಟ್ಟಣ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿನ ಅವ್ಯವಸ್ಥೆ ಖಂಡಿಸಿ ಪೋಷಕರು ಶಾಲೆಯ ಮುಂಭಾಗ ಪ್ರತಿಭಟಿಸಿದರು.
ತಾಪಂ ಮಾಜಿ ಅಧ್ಯಕ್ಷ ಎಸ್. ರಾಮು ಮಾತನಾಡಿ, ವಸತಿ ನಿಲಯದಲ್ಲಿ 143 ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ ಸೂಕ್ತ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ವಿದ್ಯಾರ್ಥಿನಿಲಯವನ್ನು ಖಾಸಗಿ ವ್ಯಕ್ತಿಗೆ ಸೇರಿದ ಗೋದಾಮಿನಲ್ಲಿ ನಡೆಸಲಾಗುತ್ತಿದೆ. 143 ವಿದ್ಯಾರ್ಥಿನಿಯರಿರುವ ವಸತಿ ಶಾಲೆಯಲ್ಲಿ ಕೇವಲ 1 ಶೌಚಾಲಯವಿದ್ದು, ಸ್ನಾನಕ್ಕೆ ನೀರಿಲ್ಲದಂತಾಗಿದೆ. ಸ್ನಾನ ಮಾಡಲು ವೇಳಾಪಟ್ಟಿ ಅಳಪಡಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯವಾಗಿದ್ದು, ರಾತ್ರಿ ವೇಳೆಯಲ್ಲಿ ಯಾವುದೇ ಭದ್ರತೆ ಇಲ್ಲದೆ ವಿದ್ಯಾರ್ಥಿನಿಯರು ಹೆದರಿಕೆಯಿಂದ ವಾಸಿಸುವಂತಾಗಿದೆ.
ಈ ಹಿಂದೆ ಇದೇ ರೀತಿ ಹೆಣ್ಣುಮಕ್ಕಳನ್ನು ಇದೇ ಕಟ್ಟಡದಲ್ಲಿ ಇರಿಸಲಾಗಿದ್ದ ವೇಳೆ ಪ್ರತಿಭಟನೆ ನಡೆಸಲಾಗಿತ್ತು. ಅದರಿಂದಾಗಿ ಗೋಣಿಕೊಪ್ಪ ರಸ್ತೆಯಲ್ಲಿರುವ ಬಾಲಕರ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಸೋಮವಾರದಿಂದ ಮತ್ತೆ ಇದೇ ಕಟ್ಟಡಕ್ಕೆ ಕಿತ್ತೂರು ರಾಣಿಚನ್ನಮ್ಮ ವಸತಿ ನಿಲಯ ಸ್ಥಳಾಂತರಿಸಿದ್ದಾರೆ. ಇದು ಸರಿಯಲ್ಲ. ಶಾಲೆಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸದಿದ್ದಲ್ಲಿ ಮಕ್ಕಳಿಗೆ ವರ್ಗಾವಣೆ ಪತ್ರ ನೀಡುವಂತೆ ಒತ್ತಾಯಿಸಿದರು.
ತಾಲೂಕು ಪ್ರಭಾರ ಸಮಾಜ ಕಲ್ಯಾಣಾಧಿಕಾರಿ ಹೊನ್ನೇಗೌಡ, ಬಿಇಒ ಕರೀಗೌಡ, ತಾಪಂ ಪ್ರಭಾರ ಅಧ್ಯಕ್ಷ ಅತ್ತಹರ್ಮತಿನ್ ಪ್ರತಿಭಟನಾ ಸ್ಥಳಕ್ಕಾಗಮಿಸಿ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ಇದೇ ವೇಳೆ ವಸತಿ ನಿಲಯದಲ್ಲಿ ಮಕ್ಕಳು ಜ್ವರದಿಂದ ಬಳಲಿ ಶಾಲೆಗೆ ಹೋಗದೆ ಉಳಿದಿರುವುದನ್ನು ಕಂಡು ಆತಂಕ ವ್ಯಕ್ತಪಡಿಸಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹೊನ್ನೇಗೌಡ ಮಾತನಾಡಿ, ವಸತಿ ನಿಲಯವನ್ನು ಮತ್ತೆ ಗೋಣಿಕೊಪ್ಪ ರಸ್ತೆಯಲ್ಲಿರುವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಸ್ಥಳಾಂತರಿಸುವ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆದರು. ತಾಪಂ ಸದಸ್ಯ ನವಿಲೂರು ಮಹದೇವ್, ಪೋಷಕರಾದ ಶಿವರಾಂ, ತಮ್ಮೇಗೌಡ, ಶಂಕರ, ಕುಮಾರ, ಉದಯ್, ರಮೇಶ್, ರಾಜ, ವಿಶ್ವನಾಥ್, ಶಿವರಾಜ್, ಕುಮಾರ, ಜಯಲಕ್ಷ್ಮಿ, ಸವಿತಾ, ಮಹಾದೇವಿ, ಗೀತಾ, ಸುಜಾತಾ, ಶಶಿಕಲಾ, ಜಾನಕಿ, ಮಾಲತಿ, ಅಂಜಲಿ, ಭದ್ರಮ್ಮ ಇದ್ದರು.