ಕಾರಂಜಿ ಕೆರೆಗೆ ಒಳಚರಂಡಿ ಕೊಳವೆ ಮಾರ್ಗ: ಪರಿಶೀಲನೆ
ಮೈಸೂರು: ಕಾರಂಜಿ ಕೆರೆಗೆ ಹರಿಯುತ್ತಿರುವ ಮಲಿನ ನೀರನ್ನು ತಡೆಗಟ್ಟುವ ಸಲುವಾಗಿ ಕೈಗೊಂಡಿರುವ ಒಳಚರಂಡಿ ಕೊಳವೆ ಮಾರ್ಗದ ಕಾಮಗಾರಿಯನ್ನು ನಗರ ಪಾಲಿಕೆ ಎಂಜಿನಿಯರುಗಳು ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಗುರುವಾರ ಪರಿಶೀಲಿಸಿದರು.
ನಗರದ ರಾಘವೇಂದ್ರ ನಗರ, ವಿದ್ಯಾನಗರ, ಗಿರಿಯಾಭೋವಿ ಪಾಳ್ಯ, ಸಿದ್ದಾರ್ಥನಗರ ಹಾಗೂ ಕುರುಬಾರಹಳ್ಳಿ ಪ್ರದೇಶಗಳ ಒಳಚರಂಡಿ ನೀರು 500 ಎಂಎಂ ವ್ಯಾಸದ ಆರ್ಸಿಸಿ ಒಳಚರಂಡಿ ಕೊಳವೆ ಮಾರ್ಗದ ಮೂಲಕ ಸಿದ್ದಾರ್ಥನಗರ ಹಾಗೂ ಕಾರಂಜಿ ಕೆರೆ ಆವರಣದ ಒಳಗೆ ಹಾಯ್ದು ಲಲಿತಮಹಲ್ ರಸ್ತೆಯ ಮೂಲಕ ಹರಿದು ನಂಜನಗೂಡು ರಸ್ತೆಯ ಮುಖಾಂತರ ವಿದ್ಯಾರಣ್ಯಪುರಂ ಬಳಿ ಇರುವ ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ ಸೇರುತ್ತಿದೆ.
ಕಾರಂಜಿಕೆರೆ ಆವರಣದಲ್ಲಿ ಅಳವಡಿಸಿರುವ 500 ಎಂಎಂ ವ್ಯಾಸದ ಕೊಳವೆ ಮಾರ್ಗ ಬಹಳ ಹಳೆಯದಾಗಿದ್ದು ಹೂಳಿನಿಂದ ಕೂಡಿರುತ್ತದೆ. ಹಾಲಿ ಕಾರಂಜಿ ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿನ ಬಡಾವಣೆಗಳು ಸಂಪೂರ್ಣವಾಗಿ ಬೆಳೆದಿದ್ದು ಜನಸಾಂಧ್ರತೆ ಹೆಚ್ಚಳದಿಂದಾಗಿ ಒಳಚರಂಡಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ 500 ಎಂಎಂ ವ್ಯಾಸದ ಆರ್ಸಿಸಿ ಕೊಳವೆ ಮಾರ್ಗ ಕೆಲವು ಕಡೆ ಕಟ್ಟಿಕೊಂಡಿದ್ದು ಆಳವಾದ ಗುಂಡಿಗಳು ತುಂಬಿ ಹರಿಯುತ್ತಿದ್ದವು. ಇದನ್ನು ಸರಿಪಡಿಸಲು ಮುಖ್ಯಮಂತ್ರಿಗಳ 100 ಕೋಟಿ ಅನುದಾನದಿಂದ 3.30 ಕೋಟಿ ಬಿಡುಗಡೆಯಾಗಿತ್ತು. ಈ ಕಾಮಗಾರಿ ಪ್ರಗತಿಯನ್ನು ಸದಸ್ಯರು ಅವಲೋಕಿಸಿದರು.
ಈ ಎಲ್ಲ ಕೆಲಸಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸಲಹಾ ಸಮಿತಿ ಅಧ್ಯಕ್ಷ ಪ್ರೊ.ಸೈಯದ್ ಶಕೀಬ್ ಉರ್ ರೆಹಮಾನ್, ಸದಸ್ಯರಾದ ಸಿ.ಎನ್.ಬಾಬು, ಟಿ.ಜಯದೇವಪ್ಪ, ಪಿ.ಎಸ್. ಚಂದ್ರಣ್ಣ, ಅಧೀಕ್ಷಕ ಎಂಜಿನಿಯರ್ ಕೃಷ್ಣ, ಕಾರ್ಯಪಾಲಕ ಎಂಜಿನಿಯರ್ ಡಿ.ಎಲ್. ರಾಜು ಗುತ್ತಿಗೆದಾರರಿಗೆ ಅಗತ್ಯ ಸಲಹೆ ಸೂಚನೆ ನೀಡಿದರು. ಗುತ್ತಿಗೆದಾರ ಸಿದ್ದಪ್ಪ ಸಲಹೆ ಅಳವಡಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಕುಕ್ಕರಹಳ್ಳಿ ಕೆರೆ ಸಂರಕ್ಷಣಾ ಸಮಿತಿ ಸಂಚಾಲಕ ಪ್ರೊ..ಕೆ.ಎಂ. ಜಯರಾಮಯ್ಯ, ಪಾಲಿಕೆ ಸದಸ್ಯರಾದ ಮಾ.ವಿ. ರಾಮಪ್ರಸಾದ, ಕೆ.ಟಿ. ಚೆಲುವೇಗೌಡ ಇದ್ದರು.