ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ಹುಣಸೂರು: ಚಿರತೆಯೊಂದು ರೈತನೊಬ್ಬನ ಮೇಲೆ ದಾಳಿಸಿದ ಘಟನೆ ತಾಲೂಕಿನ ಕೂಡ್ಲೂರಿನಲ್ಲಿ ನಡೆದಿದೆ.
ತಾಲೂಕಿನ ಹನಗೋಡು ಹೋಬಳಿಯ ಕೂಡ್ಲೂರು ಗ್ರಾಮದ ರೈತ ಪುಟ್ಟು ಎಂಬಾತ ಬುಧವಾರ ರಾತ್ರಿ ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾಗ ಚಿರತೆ ದಾಳಿ ನಡೆಸಿದ್ದರಿಂದ ಸಣ್ಣ- ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ಅದೆ ಗ್ರಾಮದ ಆಂತೋಣಮ್ಮ ಅವರಿಗೆ ಸೇರಿದ ಕುರಿ ಹಾಗೂ ನಾಯಿಯನ್ನು ಹೊತ್ತೊಯ್ದಿದೆ. ರಾಜೇಂದ್ರಗೆ ಸೇರಿದ ಕರುವೊಂದನ್ನು ಗಾಯಗೊಳಿಸಿದೆ.
ಕಳೆದೆರಡು ದಿನಗಳಿಂದ ರಾತ್ರಿ ವೇಳೆ ಕೊಟ್ಟಿಗೆಗೆ ದಾಳಿ ಮಾಡುತ್ತಿರುವ ಚಿರತೆ ಸಾಕಷ್ಟು ಅನಾಹುತ ಮಾಡಿದ್ದರೆ, ಜಮೀನಿನ ಬಳಿ ಕಾವಲು ಕಾಯುತ್ತಿದ್ದ ಪುಟ್ಟುವಿನ ಮೇಲೆ ದಾಳಿಯಿಟ್ಟಿತಾದರೂ ಪಕ್ಕದಲ್ಲೆ ಇದ್ದ ಪಂಪ್ಸೆಟ್ ಮನೆಗೆ ಓಡಿ ಆಶ್ರಯ ಪಡೆದಿದ್ದರಿಂದ ಪ್ರಾಣಾಪಾಯದಿಂದ ಪಾರಾದರು. ಚಿರತೆಯ ಹಾವಳಿಯಿಂದ ಕಂಗಾಲಾಗಿರುವ ಗ್ರಾಮಸ್ಥರು ಪ್ರಾಣಿಗಳನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರದ ಜೊತೆಗೆ ಚಿರತೆ ಹಿಡಿಯಲು ಬೋನು ಇಡಬೇಕೆಂದು ಆಗ್ರಹಿಸಿದ್ದಾರೆ.
ವಡ್ಡರಗುಡಿಯಲ್ಲಿ ಕಾಣಿಸಿಕೊಂಡ ಚಿರತೆ
ಎಚ್.ಡಿ. ಕೋಟೆ: ತಾಲೂಕಿನ ವಡ್ಡರಗುಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು ಗ್ರಾಮಸ್ಥರು ಭಯಭೀತಿಗೊಂಡಿದ್ದಾರೆ. ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಷ್ಟೇ ಕಂಡುಬರುತ್ತಿದ್ದ ಚಿರತೆಗಳು ಇತ್ತೀಚೆಗೆ ಪಟ್ಟಣದ ಸಮೀಪವಿರುವ ಹಾರೋಪುರ, ಕೊಡಸೀಗೆ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಈವರೆಗೆ ಹಲವಾರು ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಂಡಿದ್ದು, ಇದನ್ನರಿತ ಅರಣ್ಯಾಧಿಕಾರಿಗಳು ಈ ಎರಡು ಗ್ರಾಮಗಳಲ್ಲಿ ಬೋನನ್ನು ಇರಿಸಲಾಗಿದೆಯಾದರೂ ಬೋನನ್ನು ಲೆಕ್ಕಿಸದೇ ಗ್ರಾಮಗಳಿಗೆ ಆಗಮಿಸುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ ಪಟ್ಟಣದಿಂದ ಕೇವಲ 2 ಕಿ.ಮೀ. ಅಂತರದಲ್ಲಿರುವ ವಡ್ಡರಗುಡಿ ಗ್ರಾಮದಲ್ಲಿ ಕಾಣಿಸಿಕೊಂಡಿದೆ.