ತ್ಯಾಜ್ಯ ಸಾಮ್ರಾಜ್ಯ
ಮಾ. ವೆಂಕಟೇಶ್
ಮೈಸೂರು: ಬಡಾವಣೆಯಲ್ಲಿನ ಬೀದಿ ಗುಡಿಸುವ ಕಸ ಹಾಗೂ ಮನೆ ಮನೆಯಲ್ಲಿ ಸಂಗ್ರಹಿಸುವ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೆ ಸಾಗಿಸುವ ಮುನ್ನ ತಾತ್ಕಾಲಿಕವಾಗಿ ಹಾಕಲು ಕಬ್ಬಿಣದ ಬೃಹದಾಕಾರದ ತೊಟ್ಟಿಯನ್ನು ಕಲ್ಪಿಸಲಾಗಿದೆ. ಆದರೆ ಇದರಲ್ಲಿ ಒಣ ಕಸದ ಜತೆಗೆ ಹಸಿ ಕಸ ಹಾಕುವುದರಿಂದ ಅದು ಕೊಳೆತು ನಾರುವಂತಾಗಿದೆ. ಅದರ ಬಳಿ ಸಂಚರಿಸುವವರು ಅಸಹ್ಯ ಪಡುವಂತಾಗಿದೆ.
ಈ ಕಸದ ತೊಟ್ಟಿ ತುಂಬವವರಿಗೂ ಅದನ್ನು ಸಾಗಿಸುವಲ್ಲಿ ಮುಂದಾಗುವುದಿಲ್ಲ. ಇದರಿಂದ ಇಂತಹ ಅನೈರ್ಮಲ್ಯದ ಪರಿಸ್ಥಿತಿಯನ್ನು ನಿವಾಸಿಗಳು ಅನುಭವಿಸುವಂತಾಗಿದೆ. ಉದಾಹರಣೆಗೆ ವಾರ್ಡ್ ಸಂಖ್ಯೆ 11 ರಲ್ಲಿನ ಧರ್ಮಸಿಂಗ್ ಕಾಲೋನಿ ಹಾಗೂ ವಿಶ್ವೇಶ್ವರನಗರದ ಬಿಂದು ಬೇಕರಿ ಬಳಿ ಹಾಕಿರುವ ಕಸದ ತೊಟ್ಟಿ ನಿದರ್ಶನ.
ಕೈಗಾರಿಕಾ ಪ್ರದೇಶವನ್ನೂ ಹೊಂದಿರುವ ಇಲ್ಲಿನ ಭಾಗದಲ್ಲಿ ಕೊಳಚೆ ಪ್ರದೇಶಗಳು ಇವೆ. ಅಲ್ಲದೆ ವೀರಶೈವರ ರುದ್ರಭೂಮಿ, ಕಿಶ್ಚಿಯನ್ರ ಸ್ಮಶಾನ, ಅಶೋಕಪುರಂ ಹಾಗೂ ಪೌರಕಾರ್ಮಿಕರ ಸ್ಮಶಾನ ಸೇರಿದಂತೆ ಒಟ್ಟು 4 ಸ್ಮಶಾನಗಳಿವೆ. ಇವುಗಳಿಂದಾಗಿ ಹೆಚ್ಚಿನ ತ್ಯಾಜ್ಯ ಉತ್ಪಾದನೆಯಾಗುತ್ತಿದೆ.
ತ್ಯಾಜ್ಯ ಅಧಿಕ ಉತ್ಪಾದನೆ ಆಗುತ್ತಿರುವ ಈ ವಾರ್ಡ್ನಲ್ಲಿ 22 ಮಂದಿ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಕಸ ಸಾಗಿಸುವ ಟ್ರ್ಯಾಕ್ಟರ್ಗೆ ಹಾಗೂ ಬೀದಿ ಕುಡಿಸುವ ಮತ್ತು ಮೋರಿ ಸ್ವಚ್ಛತೆಗೂ ಇವರೇ ಕಾರ್ಯ ನಿರ್ವಹಿಸಬೇಕಿದೆ. ಆದ್ದರಿಂದ ಬೀದಿಯ ಸ್ವಚ್ಛತೆ ಹಾಗೂ ಮನೆ ಮನೆ ಕಸವನ್ನು ಸಮರ್ಪಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಲು ಸಿಬ್ಬಂದಿ ಸಮಸ್ಯೆ ಎದುರಾಗಿದೆ. ವಿಶ್ವೇಶ್ವರನಗರ ಹೆಸರಿನ ಈ ವಾರ್ಡ್ ವ್ಯಾಪ್ತಿಯು ಉತ್ತರಕ್ಕೆ ಮೈಸೂರು ಮಾನಂದವಾಡಿ ರಸ್ತೆ, ವಿದ್ಯಾರಣ್ಯಪುರಂ 16ನೇ ಕ್ರಾಸ್ ಸೇರುವ ಬಿಂದು. ಸೂಯೇಜ್ ಫಾರಂ ಕಾಂಪೌಂಡ್ ಸೇರುವ ರಸ್ತೆ ಹಾಗೂ ಬಿ.ಎನ್.ರಸ್ತೆ. ಪೂರ್ವಕ್ಕೆ ಬಿ.ಎನ್.ರಸ್ತೆ, ಸೂಯೇಜ್ ಫಾರಂ ರಸ್ತೆ, ಮಾನಂದವಾಡಿ ಬಿ.ಎನ್ ಲಿಂಕ್ ರಸ್ತೆ, ದಕ್ಷಿಣಕ್ಕೆ ಬಿ.ಎನ್. ರಸ್ತೆ - ಮಾನಂದವಾಡಿ ಲಿಂಕ್ ರಸ್ತೆ, ಎಫ್ ಮತ್ತು ಇ ಬ್ಲಾಕ್ನ ಕೆಲವು ರಸ್ತೆಗಳು, ಅಕ್ಕಮಹಾದೇವಿ ರಸ್ತೆ, ಜೆ.ಪಿ.ನಗರ ಎ ಬ್ಲಾಕ್ನ ರಸ್ತೆಗಳು. ಪಶ್ಚಿಮಕ್ಕೆ ಮೈಸೂರು ಮಾನಂದವಾಡಿ ರಸ್ತೆ ಸೇರುವ ಬಿಂದುವಿನಿಂದ ವಿದ್ಯಾರಣ್ಯಪುರಂ 16ನೇ ಕ್ರಾಸ್, ಮಾನಂದವಾಡಿ ರಸ್ತೆ ಸೇರುವ ಬಿಂದುವರೆಗೆ ಒಳಗೊಂಡಿದೆ. ಇಲ್ಲಿ 13 ಸಾವಿರಕ್ಕೂ ಅಧಿಕ ಜನಸಂಖ್ಯೆ, 3300ಕ್ಕೂ ಅಧಿಕ ಮನೆ, 230 ಕ್ಕೂ ಹೆಚ್ಚಿನ ಉದ್ದಿಮೆಗಳಿವೆ.
ಈ ಭಾಗದಲ್ಲಿ ದಿನಕ್ಕೆ 4 ಟನ್ ಕಸ ಉತ್ಪಾದನೆಯಾಗುತ್ತಿದ್ದು, ಕಸ ಸಾಗಿಸಲು ಕೇವಲ ಒಂದು ಟ್ರಾಕ್ಟರ್ ಒದಗಿಸಿರುವ ಕಾರಣ, ವಾರ್ಡ್ನ ಕಸವನ್ನು ಸಂಸ್ಕರಣಾ ಘಟಕಕ್ಕೆ ಸಾಗಿಸಲು ಅನಾನುಕೂಲವಾಗಿದೆ. ಅಗತ್ಯ ಸಿಬ್ಬಂದಿ ಹಾಗೂ ವಾಹನ ಸೌಲಭ್ಯ ಕಲ್ಪಿಸಿದಾಗ ಮಾತ್ರ ಕಸ ವಿಲೇವಾರಿಗೆ ಹಾಗೂ ವಾರ್ಡ್ನ ಸ್ವಚ್ಛತೆಗೆ ಪರಿಣಾಮಕಾರಿ ಕೆಲಸ ಸಾಧ್ಯ. ಇದಕ್ಕೆ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕು.
ಈ ವಾರ್ಡ್ನಲ್ಲಿ ಅಧಿಕ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದರೂ, ಅದರ ವಿಲೇವಾರಿಗೆ ಅಗತ್ಯ ಸಿಬ್ಬಂದಿ ಹಾಗೂ ವಾಹನ ಕೊರತೆಯಿದೆ. ಅಗತ್ಯ ಪೌರಕಾರ್ಮಿಕರನ್ನು ಒದಸಿದಾಗ ಮಾತ್ರ ಹೆಚ್ಚಿನ ಕೆಲಸ ಮಾಡಬಹುದು. ಇಲ್ಲಿ ಸಂಗ್ರಹಿಸುವ ಕಸವನ್ನು ಎಕ್ಸೆಲ್ ಪ್ಲಾಂಟ್ಗೆ ಸಾಗಿಸಲಾಗುವುದು. ಇದೇ ವಾರ್ಡ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಸ್ಕರಣ ಘಟಕವಿದೆ. ಈ ಘಟಕದಿಂದ ದುರ್ನಾತ ಬರದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಮೈಸೂರು ನಗರದ ಎಲ್ಲ ವಾರ್ಡ್ನ ಕಸ ಸಂಗ್ರಹಿಸುವುದನ್ನು ತಪ್ಪಿಸಲು ಇಲ್ಲಿನ ಶಾಸಕರಾದ ಎಂ.ಕೆ. ಸೋಮಶೇಖರ್ ಆಸಕ್ತಿ ವಹಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಆಯಾಯ ಭಾಗದಲ್ಲಿ ಶೂನ್ಯಕಸ ನಿರ್ವಹಣಾ ಘಟಕ ಕೆಲಸ ಮಾಡಿದರೆ ಶೇ.70 ಹೊರೆ ತಪ್ಪಲಿದೆ.
ಎಸ್. ಉಮಾಮಣಿ, ವಾರ್ಡ್ 11, ನಗರ ಪಾಲಿಕೆ ಸದಸ್ಯೆ