ವಿಶೇಷ ಮಕ್ಕಳ ಶಿಕ್ಷಕರ ನೇಮಕದಲ್ಲೂ 'ನ್ಯೂನತೆ'
ಅಂಶಿ ಪ್ರಸನ್ನಕುಮಾರ್
ಮೈಸೂರು: ರಾಜ್ಯದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಕಲಿಕೆಗೆ ಶಿಕ್ಷಕರ ನೇಮಕಾತಿಯಲ್ಲಿ ಭಾರತೀಯ ಪುನರ್ವಸತಿ ಮಂಡಳಿಯ (ಆರ್ಸಿಐ) ನಿಯಮಾವಳಿಗಳನ್ನು ಉಲ್ಲಂಘಿಸಲಾಗುತ್ತಿರುವ ದೂರುಗಳು ಕೇಳಿ ಬಂದಿವೆ.
ಆರ್ಸಿಐ ನಿಯಮಾವಳಿ ಪ್ರಕಾರ ವಿಶೇಷ ಡಿ.ಇಡಿ ಅಥವಾ ವಿಶೇಷ ಬಿ.ಇಡಿ ತರಬೇತಿ ಪಡೆದವರನ್ನು ಮಾತ್ರ ವಿಶೇಷ ಮಕ್ಕಳ ಶಿಕ್ಷಣಕ್ಕೆ ನಿಯೋಜಿಸಬೇಕು. ಆದರೆ ರಾಜ್ಯದಲ್ಲಿ ಶಿಕ್ಷಣ ಇಲಾಖೆಯು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಸಾಮಾನ್ಯ ಶಿಕ್ಷಕರಿಗೆ 90, 45 ಅಥವಾ ಕೇವಲ 5 ದಿನಗಳ ತರಬೇತಿ ಪಡೆದವರನ್ನು ನಿಯೋಜಿಸುತ್ತಿದೆ.
ಕೇವಲ ಐದು ದಿನಗಳಲ್ಲಿ ಯಾರೇ ಆದರೂ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಬೋಧಿಸಲು ಸಂಜ್ಞಾ ಭಾಷೆ ಕಲಿಯಲು ಸಾಧ್ಯವಿಲ್ಲ. ವಿಶೇಷ ಡಿ.ಇಡಿ ಮತ್ತು ಬಿ.ಇಡಿ ಮಾಡಿದವರು ಮತ್ತು ಮಕ್ಕಳ ಪೋಷಕರಿಗೆ ಅದರಲ್ಲೂ ತಾಯಿಗೆ ಮಾತ್ರ ಆ ಮಗು ಏನು ಹೇಳುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯ ಎಂಬ ಅಭಿಪ್ರಾಯವಿದೆ.
ವಿಶೇಷ ಅಗತ್ಯವುಳ್ಳ ಮಕ್ಕಳು ಎಲ್ಲಿ ಹೆಚ್ಚಿದ್ದಾರೆ ಎಂಬುದರ ಆಧಾರದ ಮೇಲೆ ಶಿಕ್ಷಕರನ್ನು ಆಯ್ಕೆ ಮಾಡಿ, ತರಬೇತಿ ನೀಡಿ, ಅಂಥ ಶಾಲೆಗಳಿಗೆ ನಿಯೋಜಿಸಲಾಗುತ್ತದೆ. ತಾಲೂಕು ಸಮನ್ವಯ ಸಂಪನ್ಮೂಲ ಶಿಕ್ಷಕರು ಮಾತ್ರ ವಿಶೇಷ ಡಿ.ಇಡಿ ಅಥವಾ ಬಿ.ಇಡಿ ಮಾಡಿರಬೇಕು. ಆದರೆ ಶಾಲಾ ಹಂತದ ಶಿಕ್ಷಕರಿಗೆ ಇದು ಕಡ್ಡಾಯವಲ್ಲ. ಸರ್ವ ಶಿಕ್ಷಣ ಅಭಿಯಾನದಲ್ಲಿ 90, 45 ಅಥವಾ 5 ದಿನಗಳ ತರಬೇತಿ ಪಡೆದ ಶಿಕ್ಷಕರು ಸಾಕು ಎಂಬುದು ಅಧಿಕಾರಿಗಳ ಸಮರ್ಥನೆ.
ಮೈಸೂರು ಜಿಲ್ಲೆಯಲ್ಲಿ 5,911 ಮಕ್ಕಳು: ವಿಶೇಷ ಅಗತ್ಯವುಳ್ಳ ಮಕ್ಕಳು ಸಹ ಸಾಮಾನ್ಯ ಮಕ್ಕಳಂತೆ ಮುಖ್ಯ ವಾಹಿನಿಯಲ್ಲಿ ಶಿಕ್ಷಣ ಪಡೆಯುವುದು ಸರ್ವ ಶಿಕ್ಷಣ ಅಭಿಯಾನದ ಮುಖ್ಯ ಆಶಯ. ಮೈಸೂರು ಜಿಲ್ಲೆಯಲ್ಲಿ 2013-14 ರಲ್ಲಿ 5,911 ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಲಾಗಿತ್ತು. ಈ ಪೈಕಿ 5,457 ಮಕ್ಕಳು ಶಾಲಾ ಶಿಕ್ಷಣ ಪಡೆಯುತ್ತಿದ್ದಾರೆ. ತೀವ್ರ ನ್ಯೂನತೆವುಳ್ಳ 270 ಮಕ್ಕಳು ಗೃಹಾಧಾರಿತ ಶಿಕ್ಷಣ ಪಡೆಯುತ್ತಿದ್ದಾರೆ. 184 ಮಕ್ಕಳು ಶಾಲಾ ಸಿದ್ಧತಾ ಕೇಂದ್ರಗಳಿಗೆ ಒಳಪಟ್ಟಿದ್ದಾರೆ ಎಂದು ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಚಂದ್ರ ಪಾಟೀಲ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಜಿಲ್ಲೆಯ 9 ಬ್ಲಾಕ್ಗಳಲ್ಲೂ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಮೌಲ್ಯಾಂಕನ ತಪಾಸಣೆ ಶಿಬಿರ ನಡೆಸಲಾಗಿದೆ. 2,401 ಮಕ್ಕಳು ಶಿಬಿರಗಳಲ್ಲಿ ಭಾಗವಹಿಸಿದ್ದರು. 1075 ಮಂದಿಗೆ ಸಾಧನ ಸಲಕರಣೆ ನೀಡುವಂತೆ ವೈದ್ಯರು ಶಿಫಾರಸು ಮಾಡಿದ್ದರು.
ಈ ಕಾರ್ಯಕ್ರಮಕ್ಕಾಗಿ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ 10.32 ಲಕ್ಷ ಒದಗಿಸಿದ್ದು, 342 ಮಂದಿಗೆ 379 ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಬೆಂಗಳೂರಿನ ಸ್ಕಂದ ಎಜುಕೇಷನಲ್ ಮತ್ತು ಮೆಡಿಕಲ್ ಸೇವಾ ಟ್ರಸ್ಟ್ ಸಾಧನ ಸಲಕರಣೆ ಸರಬರಾಜು ಮಾಡಿತ್ತು. 2014-15ನೇ ಸಾಲಿನಲ್ಲಿ ವಿಶೇಷ ಅಗತ್ಯವುಳ್ಳ 5006 ಮಕ್ಕಳನ್ನು ಜಿಲ್ಲೆಯಲ್ಲಿ ಗುರುತಿಸಲಾಯಿತು. ಈ ಪೈಕಿ 4497 ಮಕ್ಕಳು ಶಾಲೆಗಳಲ್ಲಿ ಓದುತ್ತಿದ್ದಾರೆ. 282 ಮಂದಿ ಗೃಹಾಧಾರಿತ ಶಿಕ್ಷಣಕ್ಕೆ ಒಳಪಟ್ಟಿದ್ದಾರೆ. 227 ಮಂದಿ ಶಾಲಾ ಸಿದ್ಧತಾ ಕೇಂದ್ರಕ್ಕೆ ಒಳಪಡುವ ಮಕ್ಕಳು. 18 ವಿಶೇಷ ಶಿಕ್ಷಕರು ಹಾಗೂ 94 ಸ್ವಯಂ ಸೇವಕರಿದ್ದಾರೆ. ವಾರ್ಷಿಕ ಕ್ರಿಯಾ ಯೋಜನೆಯಲ್ಲಿ 89.42 ಲಕ್ಷ ಒದಗಿಸಲಾಗಿದೆ