ರಾಯನಕೆರೆ ಸಂಸ್ಕರಣ ಘಟಕ ನನೆಗುದಿಗೆ
ಮಾ. ವೆಂಕಟೇಶ್
ಮೈಸೂರು: ಇದು ಮೈಸೂರು ಮಹಾನಗರ ಪಾಲಿಕೆಯ ಅತ್ಯಂತ ವಿಸ್ತಾರವಾದ ವಾರ್ಡ್. ಜೆ.ಪಿ. ನಗರ ಹೆಸರಿನ ಈ ಭಾಗದಲ್ಲಿ ಆರು ಸ್ಲಂಗಳಿವೆ. ವಸತಿ ಪ್ರದೇಶದ ಜತೆಗೆ ವಿವಿಧ ಉದ್ದಿಮೆಗಳು ಇವೆ. ಇಲ್ಲಿನ ತ್ಯಾಜ್ಯದ ವಿಲೇವಾರಿ ಹಾಗೂ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಬೇಕಿದೆ.
ಪೌರಕಾರ್ಮಿಕರ ಕಾಲೋನಿ, ಜನತಾ ಬಡಾವಣೆ, ನ್ಯಾಚನಹಳ್ಳಿ ಪಾಳ್ಯ ಹಳೇಗ್ರಾಮ, ಹೊಸೂರು ಗ್ರಾಮ, ಮುಸ್ಲಿಂ ಬ್ಲಾಕ್ ಹಾಗೂ ಎಸ್ಸಿ, ಎಸ್ಟಿ ಕಾಲೊನಿ ಕೊಳಚೆ ಪ್ರದೇಶಗಳಿವೆ. ಈ ವ್ಯಾಪ್ತಿಯ ಕಸ ಸಂಗ್ರಹಣೆಗೆ ಒಟ್ಟು ನಾಲ್ಕು ಕಡೆ ತೊಟ್ಟಿಗಳನ್ನು ಅಳವಡಿಸಲಾಗಿದೆ. ಆಗಿದ್ದರೂ ಇಲ್ಲಿನ ಬೀದಿ ಬದಿಯಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ತ್ಯಾಜ್ಯ ಹರಡಿ ನಿಂತಿದೆ.
ಇಂತಹ ಮರಿ ಕಸಾಸುರರ ಹಾವಳಿಗಿಂತ ಇಲ್ಲಿನ ಎಕ್ಸೆಲ್ ಪ್ಲಾಂಟ್ನಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ದೈತ್ಯ ಕಸಾಸುರನ ಹಾವಳಿ ನಿವಾಸಿಗಳ ಪಾಲಿಗೆ ಆತಂಕ ತಂದಿದೆ. ತ್ಯಾಜ್ಯ ಸಂಸ್ಕರಣೆ ಘಟಕದಿಂದ ಹೊರ ಸೂಸುವ ದುರ್ನಾತ, ಇದರಿಂದ ಉತ್ಪಾದನೆಯಾಗುವ ಸೊಳ್ಳೆಗಳ ಕಾಟದಿಂದ ಬೆಸೆತ್ತು ದೊಡ್ಡ ಹೋರಾಟವೇ ನಡೆದು ಈ ಘಟಕವನ್ನು ಸ್ಥಳಾಂತರಿಸಬೇಕು ಎಂಬ ಕೂಗು ಕೇಳಿಬಂದದ್ದು ಇಲ್ಲವೆನ್ನುವಂತಿಲ್ಲ. ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ಎಕ್ಸೆಲ್ ಪ್ಲಾಂಟ್ನಿಂದ ಆಗುತ್ತಿರುವ ತೊಂದರೆ ತಪ್ಪಿಸುವ ಸಲುವಾಗಿ ಶಾಸಕ ಎಂ.ಕೆ. ಸೋಮಶೇಖರ್ ಅವರು ಹಿಂದೆ ದೊಡ್ಡ ಹೋರಾಟವನ್ನೇ ನಡೆಸಿದರು. ಎಕ್ಸೆಲ್ ಪ್ಲಾಂಟ್ನ ಹೊರೆ ತಪ್ಪಿಸುವ ಸಲುವಾಗಿ ಕೆಸರೆ, ರಾಯನಕೆರೆಯ ಬಳಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಯಿತು.
ಈ ಪ್ರದೇಶದಲ್ಲಿ 12,960 ಮಂದಿ ಜನಸಂಖ್ಯೆ, 2,800 ಮನೆಗಳು, ಹಾಗೂ 340 ಉದ್ದಿಮೆಗಳಿವೆ. ವಾರ್ಡ್ನ ಉತ್ತರಕ್ಕೆ ಮೈಸೂರು ಮಾನಂದವಾಡಿ ರಸ್ತೆ, ಬಿ.ಎನ್. ರಸ್ತೆ, ಜೆ.ಪಿ. ನಗರ 20ನೇ ಕ್ರಾಸ್, ಎ ಮತ್ತು ಬಿ ಬ್ಲಾಕ್, 10 ಮುಖ್ಯ ರಸ್ತೆಯಿಂದ ಬಿ ಬ್ಲಾಕ್ 2ನೇ ಮೇನ್, ಮಾನಂದವಾಡಿ ಲಿಂಕ್ ರಸ್ತೆ, ಪೂರ್ವಕ್ಕೆ ಬಿ.ಎನ್. ರಸ್ತೆ, ಮಾನಂದವಾಡಿ ಬಿ.ಎನ್ ರಸ್ತೆ ಹಾಗೂ ರಿಂಗ್ ರಸ್ತೆ, ದಕ್ಷಿಣಕ್ಕೆ ಬಿ.ಎನ್. ರಸ್ತೆ, ರಿಂಗ್ ರಸ್ತೆ ಮುಖಾಂತರ ರೈಲ್ವೆ ಅಂಡರ್ ಬ್ರಿಡ್ಜ್ವರೆಗೆ, ಪಶ್ಚಿಮಕ್ಕೆ ಹೊರವರ್ತುಲ ರಸ್ತೆ ಕೆಳ ಸೇತುವೆ, ನ್ಯಾಚನಹಳ್ಳಿ ಪಾಳ್ಯ, ಮಾನಂದವಾಡಿ ರಸ್ತೆ ಹಾಗೂ ಬಿ.ಎನ್. ಲಿಂಕ್ ರಸ್ತೆ, ಮಾನಂದವಾಡಿ ರಸ್ತೆ ಸೇರುವ ಬಿಂದುವರೆಗೆ ಒಳಗೊಂಡಿದೆ.
ನಡೆಯುತ್ತಿಲ್ಲ: ಸದ್ಯಕ್ಕೆ 25 ಮಂದಿ ಪೌರಕಾರ್ಮಿಕರು ಮಾತ್ರ ಕೆಲಸ ನಿರ್ವಹಿಸುತ್ತಿದ್ದು, ಅವರುಗಳಲ್ಲಿಯೂ 4- 5 ಜನರು ವಿವಿಧ ಕಾರಣಗಳಿಂದ ರಜೆ ಹಾಕುವುದುಂಟು. ಇದರಿಂದಾಗಿ ಸ್ವಚ್ಛತೆಯ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಇಷ್ಟು ವಿಶಾಲವಾದ ವಾರ್ಡ್ಗೆ 50 ಮಂದಿ ಪೌರಕಾರ್ಮಿಕರ ಅಗತ್ಯವಿದೆ. ಇದಕ್ಕಾಗಿ ಬೇಡಿಕೆ ಸಲ್ಲಿಸಿದ್ದರೂ ಸರ್ಕಾರ ಕಿವಿಗೊಟ್ಟಿಲ್ಲ.
ಪರಿಹಾರ ದೊರಕಿಲ್ಲ
ಈಗ ಮತ್ತೆ ಸೋಮಶೇಖರ್ ಅವರು ಶಾಸಕರಾಗಿ ಒಂದು ವರ್ಷವೇ ಕಳದಿದೆ, ಆದರೂ ಎಕ್ಸೆಲ್ಪ್ಲಾಂಟ್ನ ಸಮಸ್ಯಗೆ ಪರಿಹಾರ ದೊರಕಿಲ್ಲ. ರಾಯನಕೆರೆ ಹಾಗೂ ಕೆಸರೆ ಪ್ರದೇಶದಲ್ಲಿನ ಉದ್ದೇಶಿತ ಘನತ್ಯಾಜ್ಯ ಸಂಸ್ಕರಣ ಘಟಕದ ಆರಂಭಕ್ಕೆ ಯಾವುದೇ ಸೂಚನೆ ಕಾಣುತ್ತಿಲ್ಲ. ಈ ವಾರ್ಡ್ನಲ್ಲಿ ಸಂಗ್ರಹಿಸುವ ಕಸವನ್ನು ಹತ್ತಿರದ ಎಕ್ಸೆಲ್ ಪ್ಲಾಂಟ್ಗೆ ರವಾನಿಸಲಾಗುತ್ತಿದೆ.
ಕಂಟೈನರ್ ಸರಬರಾಜಿಗೆ ಕ್ರಮ
ವಾರ್ಡ್ಗಳಿಗೆ ಅಗತ್ಯವಾದ ಕಸದ ತೊಟ್ಟಿಗಳನ್ನು (ಕಂಟೈನರ್) ಸರಬರಾಜು ಮಾಡಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ತಿಳಿಸಿದ್ದಾರೆ. ಕನ್ನಡಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಮೈಸೂರು ಕಸಬ್ ಸರಣಿ ಮಾಲಿಕೆಯಲ್ಲಿ ಜು. 9 ರ ಸಂಚಿಕೆಯಲ್ಲಿ ಮೂಲದಲ್ಲೇ ಕಸ ವಿಂಗಡಣೆ ಎಂಬ ವರದಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಅಶೋಕಪುರಂ ವ್ಯಾಪ್ತಿಯಲ್ಲಿ ಇದ್ದ ಕಸದ ತೊಟ್ಟಿಗಳು ಭಗ್ನವಾಗಿದ್ದರಿಂದ ಅವುಗಳನ್ನು ತೆಗೆಯಲಾಗಿದ್ದು, ಹೊಸ ಕಂಟೈನರ್ಗಳಿಗೆ ಟೆಂಡರ್ ಕರೆಯಲಾಗಿದೆ. ಕಂಟೈನರ್ ಸರಬರಾಜು ಆದ ಬಳಿಕ ಈ ಬಡಾವಣೆಯಲ್ಲಿ ಅಳವಡಿಸಲಾಗುವುದು.
ಈ ವಾರ್ಡ್ನ ನಿವಾಸಿಗಳಿಗೆ ಎಕ್ಸೆಲ್ ಪ್ಲಾಂಟನ್ ಕಿರಿ ಕಿರಿ ತಪ್ಪದಾಗಿದೆ. ಈ ಭಾಗದ ಶಾಸಕರ ಹೋರಾಟದ ಫಲವಾಗಿ ರಾಯನಕೆರೆ ಬಳಿ ತ್ಯಾಜ್ಯ ಸಂಸ್ಕರಣ ಘಟಕದ ನಿರ್ಮಾಣಕ್ಕೆ ಪಾಲಿಕೆ ಯೋಜನೆ ರೂಪಿಸಿದೆ. ಆದರೂ ಅದು ಇನ್ನೂ ಕಾರ್ಯಗತವಾಗಿಲ್ಲ. ಈ ಸಂಬಂಧ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದಷ್ಟು ಬೇಗ ರಾಯನಕೆರೆ ಹಾಗೂ ಕೆಸರೆ ಬಳಿ ಘನತ್ಯಾಜ್ಯ ನಿರ್ವಹಣ ಘಟಕ ಆರಂಭಿಸಿದರೆ ಎಕ್ಸೆಲ್ ಪ್ಲಾಂಟ್ನ ಹೊರೆ ತಪ್ಪಿಸಬಹುದು. ಇದರಿಂದಾಗಿ ಇಲ್ಲಿನ ಜನರ ಆರೋಗ್ಯ ರಕ್ಷಿಸಬಹುದು.
ಟಿ ಬಿ.ಎಲ್. ಬೈರಪ್ಪ, ವಾರ್ಡ್ 12, ನಗರ ಪಾಲಿಕೆ ಸದಸ್ಯ