ನಿಗದಿತ ಪ್ರಮಾಣದಷ್ಟೇ ತಂಬಾಕು ಬೆಳೆಯಲು ಸಲಹೆ
ಪಿರಿಯಾಪಟ್ಟಣ: ತಂಬಾಕು ಮಂಡಳಿ ಶಿಫಾರಸು ಮಾಡಿದ ಪ್ರಮಾಣದಷ್ಟು ಮಾತ್ರ ತಂಬಾಕು ಬೆಳೆಯುವಂತೆ ತಂಬಾಕು ಹರಾಜು ಮಾರುಕಟ್ಟೆ 62ರ ಹರಾಜು ಅಧೀಕ್ಷಕ ಬಿ.ಮಂಜುರಾಜ್ ಹೇಳಿದರು. ತಾಲೂಕಿನ ಇಟ್ಟಗಳ್ಳಿ ಗ್ರಾಮದಲ್ಲಿ ತಂಬಾಕು ಮಂಡಳಿ ವತಿಯಿಂದ ಏರ್ಪಡಿಸಿದ್ದ ಉತ್ತಮ ಕೃಷಿ ಪದ್ಧತಿ ವಿಚಾರವಾಗಿ ವಿಡಿಯೋ ಚಿತ್ರಗಳ ಮೂಲಕ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬಹುದಾದ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲೂಕಿನ ತಂಬಾಕಿಗೆ ಉತ್ತಮ ಬೇಡಿಕೆ ಇದ್ದು, ರೈತರು ತಂಬಾಕು ಬೆಳೆಯ ಗುಣಮಟ್ಟದ ಕಡೆ ಹೆಚ್ಚು ಗಮನ ಹರಿಸಬೇಕು. ಮಂಡಳಿ ನಿಗದಿಪಡಿಸಿದ ಪ್ರಮಾಣದಷ್ಟು ತಂಬಾಕನ್ನು ಬೆಳೆಯುವುದರ ಜತೆಗೆ ಪರ್ಯಾಯ ಬೆಳೆಗಳ ಕಡೆಗೂ ಗಮನಹರಿಸುವಂತೆ ತಿಳಿಸಿದರು. ವೀಡಿಯೋ ದೃಶ್ಯಾವಳಿಗಳ ಮೂಲಕ ಅಂತರ ಬೇಸಾಯ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ, ಬೆಳೆಯಲ್ಲಿ ಕೀಟನಾಶಕಗಳ ಉಳಿಕೆ ಅಂಶಗಳ ನಿಯಂತ್ರಣ, ಕುಡಿ ಮತ್ತು ಕಂಕುಳ ಕುಡಿಯ ನಿರ್ವಹಣೆ, ಕಟಾವು ಮತ್ತು ಹದಗೊಳಿಸುವ ವಿಧಾನ, ಇಂಧನ ಬಳಕೆ ಹಾಗೂ ಉಳಿತಾಯಕ್ಕೆ ವೆಂಚುರಿ ಒಲೆ, ಮೆದೆ ಹಾಕುವ ಕುರಿತು ಮಾಹಿತಿ ನೀಡಲಾಯಿತು.