ವೈದ್ಯಾಧಿಕಾರಿ ವರ್ಗಾವಣೆಗೆ ಮುಖ್ಯಾಧಿಕಾರಿಗೆ ಆಗ್ರಹ
ಪಿರಿಯಾಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಹದೇವಸ್ವಾಮಿ ಅವರನ್ನು ಆಡಳಿತ ವೈದ್ಯಾಧಿಕಾರಿ ಪದವಿಯಿಂದ ತೆಗೆಯುವಂತೆ ಹಾಗೂ ಅವರನ್ನು ಬೇರೆಡೆಗೆ ವರ್ಗಾಯಿಸುವಂತೆ ಸಾರ್ವಜನಿಕರು ಆರೋಗ್ಯ ಇಲಾಖೆ ಜಾಗೃತ ದಳದ ಮುಖ್ಯಾಧಿಕಾರಿ ಸತೀಶ್ಕುಮಾರ್ ಅವರಲ್ಲಿ ಮನವಿ ಮಾಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ವೈದ್ಯರ ಹಾಗೂ ನರ್ಸ್ಗಳ ಕರ್ತವ್ಯಕ್ಕೆ ಸಂಬಂಧಿಸಿದಂತೆ ಅನ್ಯೋನ್ಯತೆ ಕೊರತೆ ಬಗ್ಗೆ ಇಲಾಖೆಯ ಜಾಗೃತ ದಳಕ್ಕೆ ನರ್ಸ್ಗಳು ದೂರು ಸಲ್ಲಿಸಿದ್ದರು. ಈ ಸಂಬಂಧ ಪಟ್ಟಣ ಆಸ್ಪತ್ರೆಗೆ ಆಗಮಿಸಿದ್ದ ಜಾಗೃತ ದಳದ ಅಧಿಕಾರಿಗಳನ್ನು ಭೇಟಿ ಮಾಡಿದ ಸಾರ್ವಜನಿಕರು, ಡಾ.ಮಹದೇವಸ್ವಾಮಿ ಅವರಿಂದ ಬಹಳ ಅನ್ಯಾಯ ನಡೆಯುತ್ತಿದ್ದು ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಆಸ್ಪತ್ರೆ ಕೆಲವು ವೈದ್ಯರ ಹಾಗೂ ನರ್ಸ್ಗಳ ನಡುವೆ ಕರ್ತವ್ಯದ ವಿಚಾರವಾಗಿ ಅನ್ಯೋನ್ಯತೆಯ ಕೊರತೆ ಬಗ್ಗೆ ವಿಚಾರಣೆ ನಡೆಸಿದ ಜಾಗೃತ ದಳದ ಅಧಿಕಾರಿಗಳು, ನರ್ಸ್ಗಳ ಹಾಗೂ ವೈದ್ಯರ ನಡುವಿನ ವೈಷಮ್ಯವನ್ನು ದೂರ ಮಾಡುವಲ್ಲಿ ಯಶಸ್ವಿಯಾದರು. ನಂತರ ವೈದ್ಯರು ಹಾಗೂ ಸಾರ್ವಜನಿಕ ಸೇವೆಗೆ ಮುಂದಾಗುವಂತೆ ಸತೀಶ್ಕುಮಾರ್ ತಿಳಿಸಿದರು.