ಕರ್ನಾಟಕ ಸಂಪೂರ್ಣ ಸಾಕ್ಷರತೆ ರಾಜ್ಯ ಆಗಬೇಕು: ಡಾ. ತುಕಾರಾಂ
ಮೈಸೂರು: 2017ರ ವೇಳೆಗೆ ಕರ್ನಾಟಕ ರಾಜ್ಯ ಸಂಪೂರ್ಣ ಸಾಕ್ಷರತ ರಾಜ್ಯವಾಗಬೇಕು ಎಂದು ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್. ತುಕಾರಾಂ ಹೇಳಿದರು.
ರಾಜ್ಯ ಸಂಪನ್ಮೂಲ ಕೇಂದ್ರ ಮತ್ತು ಲೋಕಶಿಕ್ಷಣ ನಿರ್ದೇಶನಾಲಯವು ಒಡಿಪಿ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ ಸಾಕ್ಷರ ಭಾರತ್ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಸರ್ಕಾರೇತರ ತಾಲೂಕು ಸಂಯೋಜಕರು ಮತ್ತು ಜಿಲ್ಲಾ ಸಂಯೋಜಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಲೋಕಶಿಕ್ಷಣ ನಿರ್ದೇಶನಾಲಯವು ರಾಷ್ಟ್ರಮಟ್ಟದಲ್ಲಿ ಪ್ರಶಂಸೆಗೆ ಒಳಗಾಗಿದೆ. ಕಳೆದ ತರಬೇತಿಯಲ್ಲಿ ನಾವು 36 ಲಕ್ಷ ಮಂದಿ ಅಕ್ಷರ ಕಲಿಕೆ ಅಪೇಕ್ಷಿತರ ಗುರಿ ಮುಟ್ಟಿದ್ದೇವೆ. ಈ ಬಾರಿ 16 ಲಕ್ಷ ಗುರಿ ಇದೆ. ನಾವು ಬದ್ಧತೆಯಿಂದ ಮತ್ತು ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ 2017ರ ವೇಳೆಗೆ ಕರ್ನಾಟಕ ರಾಜ್ಯ ಸಂಪೂರ್ಣ ಸಾಕ್ಷರತ ರಾಜ್ಯವಾಗಲಿದೆ. ರಾಜ್ಯದ ರಾಯಚೂರು, ಯಾದಗಿರಿ ಜಿಲ್ಲೆ ಸೇರಿದಂತೆ ಅನಕ್ಷರಸ್ಥ ಮಹಿಳೆಯರು ಹೆಚ್ಚಿರುವ ಜಿಲ್ಲೆಗಳ ಕಡೆ ಗಮನ ನೀಡಬೇಕು ಎಂದರು.
ಅಗತ್ಯ ಸಹಾಯ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಅಗತ್ಯ ಸಹಾಯವನ್ನು ರಾಜ್ಯ ಸಂಪನ್ಮೂಲ ಕೇಂದ್ರ ನೀಡಲು ಸಿದ್ಧವಿದೆ. ನೀವು ಏಕಾಂಗಿಯಲ್ಲ. ನಿಮ್ಮ ಜೊತೆ ನಾವಿದ್ದೇವೆ. ನಿರೀಕ್ಷಿತ ಫಲಿತಾಂಶ ನೀಡಬೇಕಷ್ಟೆ. ಆದ್ದರಿಂದ ತಾವೆಲ್ಲರೂ ಕಾಳಜಿ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು. ನೀವು ಇಲ್ಲಿ ಕಲಿತದ್ದನ್ನು ಅನುಷ್ಠಾನಕ್ಕೆ ತರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಲೋಕ ಶಿಕ್ಷಣ ನಿರ್ದೇಶನಾಲಯದ ಉಪ ನಿರ್ದೇಶಕಿ ಪ್ರಭಾವತಿ ಮಾತನಾಡಿ, ರಾಜ್ಯದಲ್ಲಿ ತಮಗೆ ನೀಡಿರುವ ಗುರಿ ಸಾಧಿಸಬೇಕು ಎಂದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಕೆ. ಶಂಕರೇಗೌಡ, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ರಾಜ ಹೊಸಮಾಳ, ಮಮತಾ ಇದ್ದರು. ಶಿಬಿರ ಸಂಯೋಜಕ ತೇ.ಸಿ. ವಿಶ್ವೇಶ್ವರಯ್ಯ ಸ್ವಾಗತಿಸಿದರು.
ಫಿಡೆ ಆರ್ಬಿಟರ್ಸ್ ಪರೀಕ್ಷೆ: ರವಿ ಕಿರಣ್ ತೇರ್ಗಡೆ
ಮೈಸೂರು: ಮೈಸೂರಿನ ಡಿ.ಜೆ. ರವಿ ಕಿರಣ್ ಅವರು ಫಿಡೆ ಆರ್ಬಿಟರ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ದೆಹಲಿಯಲ್ಲಿ ಅಖಿಲ ಭಾರತ ಚೆಸ್ ಫೆಡರೇಷನ್ ಮತ್ತು ಏಷಿಯನ್ ಚೆಸ್ ಫೆಡರೇಷನ್ ಸಹಯೋಗದಲ್ಲಿ ಜೂನ್ 30 ರಂದು ಆಯೋಜಿಸಿದ್ದ ಫಿಡೆ ಆರ್ಬಿಟರ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ರವಿ ಕಿರಣ್ ಮೈಸೂರು ಪ್ರೊಫೆಷನಲ್ಸ್ ಚೆಸ್ ಅಕಾಡೆಮಿಯ ತರಬೇತುದಾರರಾಗಿದ್ದಾರೆ.