ತಂಬಾಕು ನಿಯಂತ್ರಣ ಕಾನೂನು ಪರಿಣಾಮಕಾರಿಯಾಗಿರಲಿ: ಅರ್ಚನಾ
ಕ.ಪ್ರ. ವಾರ್ತೆ, ಮೈಸೂರು, ಜು.15
ತಂಬಾಕು ನಿಯಂತ್ರಣ ಕಾನೂನುಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಸಂಯುಕ್ತವಾಗಿ ಜಿಲ್ಲಾ ಮಟ್ಟದ ಪ್ರಾಧಿಕೃತ ಅಧಿಕಾರಿಗಳಿಗೆ (ಜಿಲ್ಲಾ ತನಿಖಾ ತಂಡ) ಕರ್ನಾಟಕದಲ್ಲಿ ತಂಬಾಕು ನಿಯಂತ್ರಣ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂಬಾಕು ಉತ್ಪನ್ನಗಳನ್ನು ಸೇವನೆಯಲ್ಲಿ ಯುವಜನರು ಹೆಚ್ಚಾಗಿ ತೊಡಗಿರುವುದು ಆತಂಕಕಾರಿ. ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ತಂಬಾಕು ನಿಯಂತ್ರಣ ಕಾನೂನುಗಳ ಅನುಷ್ಠಾನಗೊಳಿಸಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಮಾದಕದಿಂದ ಮನೋರೋಗ: ಮೈಸೂರು ವೈದ್ಯಕೀಯ ಕಾಲೇಜಿನ ಮನೋತಜ್ಞರಾದ ಡಾ.ಬಿ.ಎನ್. ರವೀಶ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಮನೋರೋಗ ಉಂಟಾಗುತ್ತದೆ. ತಂಬಾಕು ಸೇವನೆಯನ್ನು ತೊಡೆದು ಹಾಕಲು ಕೇವಲ ಕಾನೂನು ಹೋರಾಟದಿಂದ ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬರ ಸಹಭಾಗಿತ್ವ ಹಾಗೂ ಹೋರಾಟ ಅಗತ್ಯ ಎಂದು ಹೇಳಿದರು. ಮಾದಕ ವಸ್ತುಗಳ ಸೇವನೆ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ತಾತ್ಕಾಲಿಕ ಸಂತೋಷಕ್ಕಾಗಿ ಮೊದಲು ತಂಬಾಕು ಸೇವನೆ ಮಾಡುವವರು, ನಂತರ ದಿನಗಳಲ್ಲಿ ಅದರ ವ್ಯಸನಿಗಳಾಗಿ ಬಿಡುತ್ತಾರೆ. 10 ಯುವಕರಲ್ಲಿ ಇಬ್ಬರು ಹಾಗೂ 10 ಯುವತಿಯರಲ್ಲಿ ಒಬ್ಬರು ತಂಬಾಕು ಅಥವಾ ಮಾದಕ ವಸ್ತುಗಳ ವ್ಯಸನಿಯಾಗಿರುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಒಂದು ಸಿಗರೇಟಿನಲ್ಲಿ 4 ಸಾವಿರ ವಿಷಕಾರಿ ಅಂಶಗಳಿವೆ. ಇದರ ಸೇವನೆಯಿಂದ ಹೃದಯ, ಶ್ವಾಸಕೋಶ, ದಂತ, ಗಂಟಲು ಸಂಬಂಧಿ ಕಾಯಿಲೆಗಳು ಅಲ್ಲದೆ ಕ್ಯಾನ್ಸರ್ ರೋಗ ಉಂಟು ಮಾಡುತ್ತದೆ. ಈ ವಿಷಯ ತಿಳಿದಿದ್ದರು ಬಹಳಷ್ಟು ಜನರು ತಂಬಾಕು ಸೇವನೆ ಮಾಡುತ್ತಿರುವುದು ಅತಂಕಕಾರಿ ಬೆಳವಣಿಗೆ ಎಂದು ಅವರು ತಿಳಿಸಿದರು.
ತಂಬಾಕು ವ್ಯಸನಿಗಳು ತಂಬಾಕನ್ನು 2 ರಿಂದ 12 ವಾರ ತ್ಯಜಿಸಿದರೆ ರಕ್ತನಾಳಗಳು ಶುದ್ಧವಾಗುತ್ತದೆ. 3 ರಿಂದ 9 ತಿಂಗಳು ತ್ಯಜಿಸಿದರೆ ಕೆಮ್ಮು ಕಡಿಮೆ ಆಗುತ್ತದೆ. ಒಂದು ವರ್ಷ ತ್ಯಜಿಸಿದರೆ ಹೃದಯಾಘಾತದಂತಹ ಪರಿಸ್ಥಿತಿಯಿಂದ ದೂರವಿರಬಹುದು. 10 ವರ್ಷಗಳು ತ್ಯಜಿಸಿದರೆ ಕ್ಯಾನ್ಸರ್ ಅಂತಹ ಕಾಯಿಲೆಯಿಂದ ದೂರ ಇರಬಹುದು ಎಂದು ಅವರು ಸಲಹೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪುಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ಆರ್. ವಿಜಯ್, ಪಶುಪಾಲನ ಇಲಾಖೆ ಉಪ ನಿರ್ದೇಶಕ ಡಾ. ದೇವದಾಸ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಲಕ್ಷ್ಮಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಪದ್ಮರಾಜ್ ಇದ್ದರು.