ಪಡಿತರ ಅಕ್ಕಿ ತಪ್ಪಿಸಲು ಹುನ್ನಾರ ಆರೋಪ
ಮೈಸೂರು: ಪಡಿತರ ಚೀಟಿ ಹೊಂದಿರುವವರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸುವುದನ್ನು ತಪ್ಪಿಸಲು ಹುನ್ನಾರ ನಡೆದಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಜೀಜುಲ್ಲಾ ಉ. ಅಜ್ಜು ಆರೋಪಿಸಿದರು. ರಾಜ್ಯ ಸರ್ಕಾರ ಕಡಿಮೆ ಬೆಲೆಯಲ್ಲಿ ವಿತರಿಸುವ ಸೌಲಭ್ಯವನ್ನು ಕಡಿತ ಮಾಡಲು ಈಗ ಎಸ್ಎಂಎಸ್ ಕಳಿಸಬೇಕು ಎಂಬಿತ್ಯಾದಿ ನಿಯಮ ವಿಧಿಸಿರುವುದರಿಂದ ಬಡ ಕಾರ್ಡ್ದಾರರ ಸುಲಿಗೆ ಆಗುತ್ತಿದ್ದು, ಈ ನಿಯಮವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ರಾಜ್ಯದಲ್ಲಿ ಪಡಿತರ ಚೀಟಿ ವಿತರಣೆ ವಿಷಯದಲ್ಲಿ ಗೊಂದಲ ಆಗಿದ್ದು, ಎಸ್ಎಂಎಸ್ ಕಳಿಸಬೇಕೆಂಬ ಹೊಸ ನಿಯಮದಿಂದ ಸ್ಲಂ ನಿವಾಸಿಗಳು, ಇನ್ನಿತರ ಬಡ ಕುಟುಂಬಗಳು ತೊಂದರೆಗೀಡಾಗಿವೆ. ಎಸ್ಎಂಎಸ್ ಕಳಿಹಿಸಲು 50 ರು.ವರೆಗೂ ಸುಲಿಗೆ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಜು. 16 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು. ಅನೇಕ ಬಡವರ ಬಳಿ ಮೊಬೈಲ್ ಇಲ್ಲ, ಜತೆಗೆ ಎಸ್ಎಂಎಸ್ ಕಳಿಹಿಸುವ ವಿಧಾನವೂ ಹಲವರಿಗೆ ತಿಳಿಯದಾಗಿದೆ. ಆದ್ದರಿಂದ ಇದನ್ನು ವಿರೋಧಿಸಿ ಪಾಲಿಕೆ ವಾರ್ಡ್ ಸಂಖ್ಯೆ 46 ರ ಸದಸ್ಯರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
ಕಸಾಯಿಖಾನೆ ಬೇಡ: ಕೆಸರೆ ಬಳಿ ಕಸಾಯಿಖಾನೆ ಸ್ಥಾಪನೆಯಿಂದ ಸಮಸ್ಯೆ ಉಂಟಾಗಲಿದೆ ಎಂದ ಅವರು, ಈ ಪ್ರದೇಶದಲ್ಲಿ ಪುಷ್ಪಾಶ್ರಮ ಚರ್ಚ್, ಮುನ್ನಾವರ ಮಸೀದಿ, ಗಣಪತಿ ದೇವಾಲಯ, ನಾರಾಯಣ ಹೃದಯಾಲಯ, ಕೊಲಂಬಿಯಾ ಏಷಿಯಾ ಆಸ್ಪತ್ರೆ ಇದ್ದು, ನಗರದಿಂದ ಹೊರಗಿನ ಪ್ರದೇಶದಲ್ಲಿ ಕಸಾಯಿಖಾನೆ ನಿರ್ಮಿಸಬೇಕೆಂದರು. ಅಪ್ಸರ್ ಅಹಮದ್, ಖುರೂಂ, ಮುಸ್ತಫಾ ಪಾಷ, ಜಾನ್ ಬಾಸ್ಕೊ, ಹಮೀದ್ ಇದ್ದರು.
ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
ಮೈಸೂರು: ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುತ್ತಿರುವ ಕೇಂದ್ರ ಎನ್ಡಿಎ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಮಂಗಳವಾರ ಪ್ರತಿಭಟಿಸಿದರು.
ಬಿಜೆಪಿ ನೇತೃತ್ವದಲ್ಲಿ ಕೇಂದ್ರ ಎನ್ಡಿಎ ಸರ್ಕಾರ ರಚನೆಯಾದ ಬಳಿಕ ಪೆಟ್ರೋಲ್, ಡೀಸೆಲ್, ರೈಲು ಪ್ರಯಾಣ ಮತ್ತು ಸರಕು ಸಾಗಾಣಿಕ ದರ ಹೆಚ್ಚಳ ಆಗಿದೆ. ಜೊತೆಗೆ ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಬೆಲೆ ಹೆಚ್ಚಳ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಕಳೆದ ಯುಪಿಎ ಸರ್ಕಾರದ ಬಜೆಟ್ ಅನ್ನು ನಕಲು ಮಾಡಿ ಈಗಿನ ಎನ್ಡಿಎ ಸರ್ಕಾರವು ಕೇಂದ್ರ ಬಜೆಟ್ ಮಂಡಿಸಿದೆ. ಜನಸಾಮಾನ್ಯರಿಗೆ ಬಜೆಟ್ನಲ್ಲಿ ಸೌಲಭ್ಯ ಒದಗಿಸಿಲ್ಲ ಎಂದು ಅವರು ಕಿಡಿಕಾರಿದರು.
ಮುಖಂಡರಾದ ಸಿ.ಎಸ್. ರಘು, ವೈಭವ್, ಎಸ್.ಪಿ. ಸೋಮಶೇಖರ್, ಪ್ರದೀಪ್ರಾಜ್, ಸಂತೋಷ್ಕುಮಾರ್, ಮುದಾಫಿರ್ ನವಾಜ್, ನದೀಮ್ ಅಹಮ್ಮದ್, ಶಿವಮಲ್ಲು, ಪಿ. ರಾಜು, ಮಂಜುನಾಥ, ನಂಜುಂಡ, ಅಯೂಬ್ ಷರೀಫ್, ಹರೀಶ್ಗೌಡ, ಸಚಿನ್, ಗುರುದತ್ತ, ರಾಜೇಶ್, ದೀಪಕ್, ಸೈಯ್ಯದ್ ಸರತ್ತಾಜ್, ಸ್ವಾಮಿನಾಯಕ, ನಾಗಣ್ಣ, ಮೊಹಮ್ಮದ್ ಹ್ಯಾರೀಶ್, ಮೊಹಮ್ಮದ್ ಇಮ್ರಾನ್, ಯಶಸ್, ಮಧು, ವಿನಯ್ಕುಮಾರ್, ರಾಜೀವ್, ಲೋಕೇಶ್, ರವಿ ಇದ್ದರು.
ವಿದ್ಯಾರ್ಥಿನಿಯರು ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಬೇಕು: ಪಾಟೀಲ್
ಮೈಸೂರು: ವಿದ್ಯಾರ್ಥಿನಿಯರು ಆತ್ಮಸ್ಥೈರ್ಯ ಬೆಳೆಸಿಕೊಂಡು ಬದುಕಿದಲ್ಲಿ ಮುಂದೆ ತಲೆದೋರುವ ಅಡತಡೆಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಮೈಸೂರು ಆಕಾಶವಾಣಿ ಉಪನಿರ್ದೇಶಕ ಡಾ. ಆನಂದ ವಿ. ಪಾಟೀಲ್ ಹೇಳಿದರು. ಮಂಗಳವಾರ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮಿತಿ ಮೀರುತ್ತಿದ್ದು ಎಲ್ಲೆಲ್ಲೂ ಆತಂಕ ಸೃಷ್ಟಿಯಾಗಿದೆ. ವಿದ್ಯಾರ್ಥಿನಿಯರು ಮನೆಯಿಂದ ಹೊರಗೆ ಬಂದರೆ ಸಾಕು ಪೋಷಕರಲ್ಲಿ ಭಯ ಕಾಡುತ್ತದೆ. ಅಷ್ಟರ ಮಟ್ಟಿಗೆ ಸಮಾಜದಲ್ಲಿ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ ಎಂದರು.
ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ತಡೆಯೊಡ್ಡಬೇಕು. ಅದು ಆಗಬೇಕೆಂದರೆ ವಿದ್ಯಾರ್ಥಿನಿಯರು ಸಂಘಟಿತರಾಗಿ ಆತ್ಮಬಲವನ್ನು ವೃದ್ಧಿಸಿಕೊಳ್ಳಬೇಕು. ಶಿಕ್ಷಣದೊಂದಿಗೆ ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ಈಗಲೂ ಕೆಲವು ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಪ್ರತಿಭೆ, ಆತ್ಮಸ್ಥೈರ್ಯ ಪ್ರದರ್ಶಿಸಿ ಛಾಪು ಮೂಡಿಸಿದ್ದಾರೆ. ಇಂತವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು. ಹಾಗಾಗಿ ಪ್ರತಿಯೊಬ್ಬರು ಎಚ್ಚೆತ್ತುಕೊಂಡಲ್ಲಿ ಗುರುತರ ಬದಲಾವಣೆ ಕಾಣಬಹುದಾಗಿದೆ ಎಂದು ಅವರು ತಿಳಿಸಿದರು. ಜೆಎಸ್ಎಸ್ ಮಹಾವಿದ್ಯಪೀಠದ ಕಾಲೇಜು ಶಿಕ್ಷಣ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ಮೃತ್ಯುಂಜಯ ಪಿ. ಕುಳೇನೂರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್. ನಾಗರಾಜ, ಶೈಕ್ಷಣಿಕ ಡೀನ್ ಡಾ.ಎಚ್.ಸಿ. ಪೊನ್ನಪ್ಪ ಇದ್ದರು.
ನಾಳೆ ಸೆಸ್ಕ್ ಜನಸಂಪರ್ಕ ಸಭೆ
ಮೈಸೂರು: ರಾಮಕೃಷ್ಣನಗರ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳ ವಿದ್ಯುತ್ ಗ್ರಾಹಕರ ಕುಂದು ಕೊರತೆ ಆಲಿಸುವ ಸಲುವಾಗಿ ಜು. 17ರ ಬೆಳಗ್ಗೆ 10.30ಕ್ಕೆ ಆಂದೋಲನ ಸರ್ಕಲ್ ಬಳಿ ಇರುವ ಎಂಡಿಎ ಕಾಂಪ್ಲೆಕ್ಸ್ 1ನೇ ಮಹಡಿ ಸೆಸ್ಕ್ ಕಚೇರಿಯಲ್ಲಿ ಜನ ಸಂಪರ್ಕ ಸಭೆ ಏರ್ಪಡಿಸಿದ್ದು, ಗ್ರಾಹಕರು ಭಾಗವಹಿಸಿ ಅಹವಾಲು ಸಲ್ಲಿಸಬಹುದು ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಪ್ರಾಣಾಯಾಮ ತರಗತಿ
ಮೈಸೂರು: ಕುವೆಂಪುನಗರದಲ್ಲಿರುವ ಶ್ರೀ ಉಪನಿಷತ್ ಯೋಗ ಕೇಂದ್ರ ಟ್ರಸ್ಟ್ನಲ್ಲಿ ಜು.17 ರಿಂದ ಏಳು ದಿನಗಳ ಕಾಲ ಪ್ರಾಣಾಯಾಮ ಮತ್ತು ಧ್ಯಾನದ ತರಗತಿ ಏರ್ಪಡಿಸಿದ್ದು, ಆಸಕ್ತರು ದೂ. 0821- 2541801 ಸಂಪರ್ಕಿಸಬಹುದು.