ಬೀದಿ ನಾಟಕ ಹೆಚ್ಚು ಸಹಕಾರಿ: ಶ್ರೀನಿವಾಸ್
ಮೈಸೂರು: ಮಕ್ಕಳಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಬೀದಿನಾಟಕ ಹೆಚ್ಚು ಪ್ರಯೋಜನಕಾರಿ ಎಂದು ಸುದರ್ಶನ ವಿದ್ಯಾಸಂಸ್ಥೆ ಮುಖ್ಯಸ್ಥ ಶ್ರೀನಿವಾಸ್ ಅಭಿಪ್ರಾಯಪಟ್ಟರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೂಟಗಳ್ಳಿ ಸುದರ್ಶನ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಂಪರ್ಕ ಹಾಗೂ ಗ್ರಾಮವಾಹಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ಜನರಿಗೆ ಹಾಗೂ ಪ್ರೌಢಶಾಲೆ ಮಕ್ಕಳಲ್ಲಿ ಅರಿವು ಮೂಡಿಸುವುದರಿಂದ ಸರ್ಕಾರಿ ಯೋಜನೆಗಳ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ತಲುಪಲಿದೆ ಎಂದು ಹೇಳಿದರು.
ಸ್ಪಂದನಾ ಮಹಿಳಾ ಕಲಾ ತಂಡದವರು ಜಾಗೃತಿ ಗೀತೆಗಳು ಹಾಗೂ ಬೀದಿ ನಾಟಕದ ಮುಖಾಂತರ ಪರಿಸರ ಶಿಕ್ಷಣ, ಮನಸ್ವಿನಿ ಯೋಜನೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಮಾಹಿತಿ ನೀಡಿ ಗಮನ ಸೆಳೆದರು. ಸುದರ್ಶನ ವಿದ್ಯಾಸಂಸ್ಥೆಯಲ್ಲಿ ನಾಲ್ವಡಿ ಕೃಷ್ಣರಾಜ್ ಒಡೆಯರ್ ಚಲನಚಿತ್ರ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಪ್ರಭಾಕರ್, ಶ್ರೀನಿವಾಸ್, ಶಾಲೆಯ ಶಿಕ್ಷಕರು, ಶಿಕ್ಷಕಿಯರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಚಾಲಕ ತೀರ್ಥಲಿಂಗಪ್ಪ ಮಳ್ಳೋಳ್ ಭಾಗವಹಿಸಿದ್ದರು.
ಜಿಪಂ ಅಧ್ಯಕ್ಷ- ಉಪಾಧ್ಯಕ್ಷ ಗದ್ದುಗೆ ಇಂದು ಚುನಾವಣೆ
ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿಯ ಮೂರನೇ ಅವಧಿಯ 20 ತಿಂಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಜು.16ರ ಮಧ್ಯಾಹ್ನ 3ಕ್ಕೆ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರ ಅಧ್ಯಕ್ಷತೆಯಲ್ಲಿ ಜಿಪಂ ಚುನಾವಣಾ ಸಭೆ ಕರೆಯಲಾಗಿದ್ದು, ಬೆಳಗ್ಗೆ 11 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮೈಸೂರು ಜಿಪಂ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಮೈಸೂರು ಜಿಪಂನಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲ. 46 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್ 21, ಜೆಡಿಎಸ್ 16, ಬಿಜೆಪಿ 8, ಪಕ್ಷೇತರ 1 ಸ್ಥಾನ ಪಡೆದಿವೆ. ಅಧಿಕಾರ ಹಿಡಿಯಲು 24 ಸದಸ್ಯರ ಬೆಂಬಲ ಬೇಕು.
ಕಾಂಗ್ರೆಸ್ ಪಕ್ಷದ ನಾಲ್ಕು ಮಂದಿ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ. ಹುಣಸೂರು ತಾಲೂಕು ಧರ್ಮಾಪುರ ಜಿಪಂ ಕ್ಷೇತ್ರದ ಸದಸ್ಯೆ ಹಾಗೂ ಶಾಸಕ ಎಚ್.ಪಿ.ಮಂಜುನಾಥ್ ಅವರ ನಾದಿನಿ ಡಾ.ಪುಷ್ಪಾವತಿ ಅಮರನಾಥ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರಲ್ಲದೆ, ಸುಧಾ ಮಹದೇವಯ್ಯ, ಗೀತಾ ಧರ್ಮೇಂದ್ರ, ಕಾವೇರಿ ಶೇಖರ್ ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳಿದ್ದು, ಬುಧವಾರ ಬೆಳಗ್ಗೆ 9ಕ್ಕೆ ಸಭೆ ನಡೆಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಸೂಕ್ತರನ್ನು ಆಯ್ಕೆ ಮಾಡಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ. ಇನ್ನೂ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಎಚ್.ಆರ್. ಭಾಗ್ಯಲಕ್ಷ್ಮಿ ಮಾತ್ರ ಅರ್ಹರಿದ್ದು, ಜೆಡಿಎಸ್ನಲ್ಲಿ ಯಾರು ಅರ್ಹರಿಲ್ಲ. ಹೀಗಾಗಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದಿಂದ ಅಧ್ಯಕ್ಷ ಸ್ಥಾನಕ್ಕೆ ಭಾಗ್ಯಲಕ್ಷ್ಮಿ ಅವರನ್ನು ಕಣಕ್ಕಿಳಿಸುವುದು ಖಚಿತ. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಎರಡೂ ಪಕ್ಷಗಳಿಂದ ಬಹುತೇಕ ಸದಸ್ಯರು ಆಕಾಂಕ್ಷಿಗಳಾಗಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಡುವುದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ.