ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೈಗೆ ಮೈಸೂರು ಜಿಲ್ಲಾ ಪಂಚಾಯಿತಿ

Vishwanath S
Updated On : 17 Jul 2014, 1:05 am

ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿಯ ಮೂರನೆ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಡಾ.ಪುಷ್ಪಾವತಿ ಅಮರನಾಥ್ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯ ಎಲ್.ಮಾದಪ್ಪ ಆಯ್ಕೆಯಾದರು.
ಜಿಪಂ ಸಭಾಂಗಣದಲ್ಲಿ ಬುಧವಾರ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರು ಚುನಾವಣೆ ನಡೆಸಿದರು. ಪ.ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪುಷ್ಪಾವತಿ ಅಮರನಾಥ್, ಬಿಜೆಪಿಯ ಎಚ್.ಆರ್. ಭಾಗ್ಯಲಕ್ಷ್ಮೀ ಅವರನ್ನು ಮಣಿಸಿ ಜಯಗಳಿಸಿದರು. ಧರ್ಮಾಪುರ ಜಿಪಂ ಕ್ಷೇತ್ರದ ಪುಷ್ಪಾವತಿ ಅವರನ್ನು 28 ಮಂದಿ ಸದಸ್ಯರು ಬೆಂಬಲಿಸಿದರೆ, ಭಾಗ್ಯಲಕ್ಷ್ಮಿ ಅವರನ್ನು 17 ಮಂದಿ ಬೆಂಬಲಿಸಿದರು. ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಂಜನಗೂಡು ತಾಲೂಕು ಬಿಳಿಗೆರೆ ಕ್ಷೇತ್ರದ ಪಕ್ಷೇತರ ಸದಸ್ಯ ಎಲ್.ಮಾದಪ್ಪ ಅವರು, ಹುಣಸೂರು ತಾಲೂಕು ಬಿಳಿಕೆರೆ ಕ್ಷೇತ್ರದ ಜೆಡಿಎಸ್‌ನ ಕೆ.ಎಂ. ಮಂಜು ಅವರನ್ನು ಮಣಿಸಿದರು. ಮಾದಪ್ಪ ಅವರನ್ನು 27 ಮತ್ತು ಮಂಜು ಅವರಿಗೆ 18 ಮಂದಿ ಸದಸ್ಯರು ಬೆಂಬಲಿಸಿದರು. ಒಟ್ಟು 46 ಸದಸ್ಯ ಬಲದ ಮೈಸೂರು ಜಿಪಂನಲ್ಲಿ ಕಾಂಗ್ರೆಸ್ 21, ಜೆಡಿಎಸ್ 16, ಬಿಜೆಪಿ 8 ಮತ್ತು ಪಕ್ಷೇತರ 1 ಸದಸ್ಯರಿದ್ದಾರೆ. ಈ ಪೈಕಿ ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ರಾಜಲಕ್ಷ್ಮೀ ಗೈರು ಹಾಜರಾದರು.
ಬೆಳಗ್ಗೆ 11ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭವಾದಾಗ ಪುಷ್ಪಾವತಿ ಅಮರನಾಥ್ ಅವರು ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ, ಭಾಗ್ಯಲಕ್ಷ್ಮಿ ಒಂದು ನಾಮಪತ್ರ ಸಲ್ಲಿಸಿದ್ದರು. ಪುಷ್ಪಾವತಿ ಅವರ ನಾಮಪತ್ರಕ್ಕೆ ಮಂಜುಳಾರಾಜ್ ಮತ್ತು ನಂದಿನಿ ಚಂದ್ರಶೇಖರ್ ಸೂಚಕರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾದಪ್ಪ ಅವರು 2 ನಾಮಪತ್ರ ಮತ್ತು ಕೆ.ಎಂ. ಮಂಜು ಒಂದು ನಾಮಪತ್ರ ಸಲ್ಲಿಸಿದ್ದರು. ಮಾದಪ್ಪ ನಾಮಪತ್ರಕ್ಕೆ ಜವರೇಗೌಡ ಮತ್ತು ರಮೇಶ್ ಸೂಚಕರಾಗಿದ್ದರೆ, ಕೆ.ಎಂ. ಮಂಜು ನಾಮಪತ್ರಕ್ಕೆ ಚಿಕ್ಕರಂಗನಾಯಕ ಸೂಚಕರಾಗಿದ್ದರು.
ಯಾರಿಗೆ ಯಾರ ಬೆಂಬಲ?: ಪುಷ್ಪಾವತಿ ಅಮರನಾಥ್‌ಗೆ ಕಾಂಗ್ರೆಸ್‌ನ 21 ಸದಸ್ಯರ ಜೊತೆಗೆ ಪಕ್ಷೇತರ ಸದಸ್ಯ ಎಲ್. ಮಾದಪ್ಪ, ಜೆಡಿಎಸ್‌ನ ಎಂ.ದೇವರಾಜು, ಎಂ.ಕೆ.ಸುಚಿತ್ರ, ಸಿ.ಟಿ.ರಾಜಣ್ಣ, ಎಂ.ಪಿ. ಚಂದ್ರೇಶ್, ಸಿ. ಪದ್ಮಾ ಬಸವರಾಜು ಮತ್ತು ಎಸ್.ಎ.ಶಿವಣ್ಣ ಬೆಂಬಲಿಸಿದರು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಮಾದಪ್ಪ ಅವರಿಗೆ ಜೆಡಿಎಸ್‌ನ ಪದ್ಮಾ ಬಸವರಾಜು ಬೆಂಬಲಿಸಲಿಲ್ಲ.
ಕೈ ಎತ್ತುವ ಮೂಲಕ ಸದಸ್ಯರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಬೆಂಬಲ ಸೂಚಿಸಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ ಅವಧಿ 2016ರ ಫೆ.10ಕ್ಕೆ ಕೊನೆಗೊಳ್ಳುವುದು. ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಬಿ.ರಾಮು ಮತ್ತು ಜಿಪಂ ಸಿಇಒ ಪಿ.ಎ. ಗೋಪಾಲ್ ಕಾರ್ಯ ನಿರ್ವಹಿಸಿದರು.
ಸಂಭ್ರಮಾಚರಣೆ: ಜಿಪಂನ ನೂತನ ಅಧ್ಯಕ್ಷರಾಗಿ ಪುಷ್ಪಾವತಿ ಅಮರನಾಥ್ ಆಯ್ಕೆಯಾಗುತ್ತಿದ್ದಂತೆ ಜಿಪಂ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಸ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ಡಾ. ಪುಷ್ಪಾವತಿ ಅಮರನಾಥ್ ಅವರಿಗೆ ಹಲವು ಸದಸ್ಯರು ಅಭಿನಂದಿಸಿದರು.
ಹುಣಸೂರು ತಾಲೂಕಿಗೆ ಮೊದಲ ಬಾರಿ
ಮೈಸೂರು: ಮೈಸೂರು ಜಿಪಂ ಅಧ್ಯಕ್ಷ ಗಾದಿ ಇದೇ ಪ್ರಥಮ ಬಾರಿಗೆ ಹುಣಸೂರು ತಾಲೂಕಿಗೆ ಒಲಿದಿದೆ. ಅಲ್ಲಿನ ಧರ್ಮಾಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ.ಪುಷ್ಪಾವತಿ ಅಮರನಾಥ್ ಅಧ್ಯಕ್ಷೆಯಾಗಿದ್ದಾರೆ. 1998 ರಲ್ಲಿ ಜನತಾದಳದ ಹನಗೋಡಿನಿಂದ ಆಯ್ಕೆಯಾಗಿದ್ದ ಎಚ್.ಕೆ.ಭಾಗ್ಯಮ್ಮ ಸುರೇಶ್ ಅವರು ಅಧ್ಯಕ್ಷೆಯಾಗಬೇಕಿತ್ತು. ಆದರೆ ಪಿರಿಯಾಪಟ್ಟಣ ತಾಲೂಕು ಕಂಪ್ಲಾಪುರದಿಂದ ಆಯ್ಕೆಯಾಗಿದ್ದ ಕೆ.ಆರ್. ಜಯಲಕ್ಷ್ಮಿ ಅವರೊಂದಿಗೆ ಪೈಪೋಟಿ ಏರ್ಪಟ್ಟು, ದಳದ ಏಳು ಸದಸ್ಯರು ಕಾಂಗ್ರೆಸ್ ಬೆಂಬಲಿಸಿದ್ದರಿಂದ ಜೆ. ಸುನೀತಾ ವೀರಪ್ಪಗೌಡ ಅಧ್ಯಕ್ಷೆಯಾಗಿದ್ದರಿಂದ ಹುಣಸೂರು ತಾಲೂಕಿಗೆ ಅವಕಾಶ ಕೈತಪ್ಪಿತ್ತು. ಸತತ ಮೂರನೇ ಬಾರಿಗೆ ಸದಸ್ಯರಾಗಿರುವ ಹುಣಸೂರಿನ ಚಿಲ್ಕುಂದದ ಸಿ.ಟಿ. ರಾಜಣ್ಣ ಈ ಬಾರಿಯ ಎರಡನೇ ಅವಧಿಯಲ್ಲಿ ಅಧ್ಯಕ್ಷರಾಗಬೇಕಿತ್ತು. ಆದರೆ ಬಿಜೆಪಿಯ ಕಾ.ಪು. ಸಿದ್ದಲಿಂಗಪ್ಪ ಅವರಿಗೆ ಅವಕಾಶ ನೀಡಿದ್ದರಿಂದ ಸಾಧ್ಯವಾಗಲಿಲ್ಲ. ಈ ತಾಲೂಕಿನ ಜಾಜಿ ತಿಮ್ಮಯ್ಯ ಮಾತ್ರ ಉಪಾಧ್ಯಕ್ಷರಾಗಿದ್ದರು.
ಮೂರನೇ ಬಾರಿ ಉಪಾಧ್ಯಕ್ಷ ಸ್ಥಾನ: ನಂಜನಗೂಡು ತಾಲೂಕಿಗೆ ನಾಲ್ಕನೇ ಬಾರಿ ಉಪಾದ್ಯಕ್ಷ ಸ್ಥಾನ ಒಲಿದಿದೆ. ಈ ಹಿಂದೆ ಮಡುವಿನಹಳ್ಳಿ ಡಿ. ಶಂಕರಪ್ಪ, ಲಲಿತಾ ಬಾಲಚಂದ್ರ, ಡಾ. ಶಿವರಾಂ ಉಪಾಧ್ಯಕ್ಷರಾಗಿದ್ದರು. ಇದೀಗ ಎಲ್. ಮಾದಪ್ಪ ಉಪಾಧ್ಯಕ್ಷರಾಗಿದ್ದಾರೆ.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮ
ಮೈಸೂರು: ಮೈಸೂರು ಜಿಪಂ ಅಧ್ಯಕ್ಷೆಯಾಗಲು ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಎಲ್ಲ ಮುಖಂಡರಿಗೆ ಡಾ.ಪುಷ್ಪಾವತಿ ಅಮರನಾಥ್ ಅಭಿನಂದನೆ ಸಲ್ಲಿಸಿದರು.
ಮೈಸೂರು ಜಿಪಂ ಅಧ್ಯಕ್ಷ ಸ್ಥಾನ ಪ.ಜಾತಿ ಮಹಿಳೆಗೆ ಮೀಸಲಾದಾಗ ಹಲವಾರು ಮಂದಿ ಆಕಾಂಕ್ಷಿಗಳಿದ್ದರು. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ಭಾವ ಹಾಗೂ ಶಾಸಕ ಎಚ್.ಪಿ.ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ನನ್ನನ್ನು ಬೆಂಬಲಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಿದರು. ಅಲ್ಲದೆ ನನ್ನ ಗೆಲವಿಗೆ ಕಾರಣರಾದ ಕಾಂಗ್ರೆಸ್‌ನ ಕಾರ್ಯಕರ್ತರು ಮತ್ತು ಜಿಪಂ ಸದಸ್ಯರನ್ನು ಅಭಿನಂದಿಸುವುದಾಗಿ ಹೇಳಿದರು. ಜಿಲ್ಲೆಯವರೆ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿರುವ ಸಂದರ್ಭದಲ್ಲಿ ನಾನು ಜಿಪಂ ಅಧ್ಯಕ್ಷೆ ಆಗಿರುವುದು ಸಂತೋಷ ತಂದಿದೆ. ಈ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ತಿಳಿಸಿದರು. ಮೂಲತಃ ಟಿ.ನರಸೀಪುರ ತಾಲೂಕು ಬನ್ನೂರಿನವಳಾದ ನಾನು ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಬಿ.ಎಸ್ಸಿ ಮುಗಿಸಿದ್ದೇನೆ. ಬೆಂಗಳೂರು ವಿವಿಯಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿ ಸಸ್ಯಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದೇನೆ. ಪರಿಸರ ಸಂರಕ್ಷಣೆ ಮತ್ತು ಪರಿಸರ ಕುರಿತ ಅರಿವು ಮೂಡಿಸುವಲ್ಲಿ ಶ್ರಮಿಸಿದ್ದೇನೆ ಎಂದರು.
ನಂಜನಗೂಡು ತಾಲೂಕು ಹೊಸಕೋಟೆಯವರಾದ ಎಲ್.ಮಾದಪ್ಪ ಬಿಳಿಗೆರೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಮೊದಲು ಎರಡೂವರೆ ವರ್ಷ ಜೆಡಿಎಸ್- ಬಿಜೆಪಿ ಬೆಂಬಲಿಸಿ, 10 ತಿಂಗಳ ಹಿಂದೆ ಕಾಂಗ್ರೆಸ್ ಕಡೆ ಹೊರಳಿ, ಆಡಳಿತ ಪಕ್ಷದ ನಾಯಕರಾಗಿದ್ದರು. ಇದೀಗ ಉಪಾಧ್ಯಕ್ಷರಾಗಿದ್ದಾರೆ. ಅವರು ಪಿಯುಸಿ ವ್ಯಾಸಂಗ ಮಾಡಿದ್ದಾರೆ. ಮಂಡಲ ಪ್ರಧಾನ ಆಗಿ, ನಂಜನಗೂಡು ಟಿಎಪಿಸಿಎಂಎಸ್‌ನ ಅಧ್ಯಕ್ಷರಾಗಿ, ತಾಪಂ ಸದಸ್ಯರಾಗಿ, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement