ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಅಧಿಕಾರ ಸ್ವೀಕಾರ
ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ತ್ಯಾಗರಾಜ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಸಿ.ಕೆ. ಮಹೇಂದ್ರ ಅವರು ದೀಪಕ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಂತೆಯೇ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜೆ. ಲೋಕೇಶಬಾಬು ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು. ಹಾಗೆಯೇ ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿ ಸ್ವಾಗತಿಸಿದರು. ಬಳಿಕ ಮಾತನಾಡಿದ ನಿರ್ಗಮಿತ ಅಧ್ಯಕ್ಷ ಸಿ.ಕೆ.ಮಹೇಂದ್ರ, ತಮ್ಮ ಅವಧಿಯಲ್ಲಿ ಸಂಘದ ಎಲ್ಲ ಸದಸ್ಯರ ಜೊತೆ ಸ್ನೇಹ ಪೂರ್ವಕವಾಗಿ ವರ್ತಿಸಿದ್ದೇನೆ. ಯಾವ ಲೋಪದೋಷಕ್ಕೂ ಅವಕಾಶ ಮಾಡಿಕೊಟ್ಟಿಲ್ಲ. ಪತ್ರಕರ್ತರ ಸಂಘವನ್ನು ಒಂದು ಕಾರ್ಮಿಕ ಸಂಘಟನೆ ಮಾದರಿಯಲ್ಲಿ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದರು. ನೂತನ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಸಿ.ಕೆ. ಮಹೇಂದ್ರ ಅವರು ನನಗೆ ಮಾದರಿ ಆಗಿದ್ದಾರೆ. ಅವರ ಇಚ್ಛೆಯಂತೆ ಸಂಘವನ್ನು ಒಂದು ಕಾರ್ಮಿಕ ಸಂಘಟನೆ ರೂಪದಲ್ಲಿ ಕಟ್ಟಲು ಸಿದ್ಧನಿದ್ದೇನೆ ಎಂದು ಹೇಳಿದರು. ಸಂಘದ ಉಪಾಧ್ಯಕ್ಷರಾದ ಎಸ್.ಟಿ.ರವಿಕುಮಾರ್, ಗಜೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶಬಾಬು, ಕಾರ್ಯದರ್ಶಿಗಳಾದ ಶ್ರೀಕಂಠಸ್ವಾಮಿ, ಸಚ್ಚಿತ್, ಖಜಾಂಚಿ ಎಸ್.ಆರ್. ಮಧುಸೂದನ್ ಇದ್ದರು.