ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಿಪ್ಪೆ ಗುಂಡಿಗಳನ್ನು ತಪ್ಪಿಸಿ

Mainashree
Updated On : 18 Jul 2014, 10:40 am

 ಮಾ. ವೆಂಕಟೇಶ್
ಮೈಸೂರು: ಶುದ್ಧ ಆಹಾರ, ನೀರು ಹಾಗೂ ಗಾಳಿಗೆ ಮಹತ್ವ ನೀಡುವಂತೆ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು ಎಂಬುದು ಸಹ ಮುಖ್ಯ. ಈ ದಿಸೆಯಲ್ಲಿ ಪ್ರತಿಯೊಬ್ಬ ನಾಗರಿಕರ ಕರ್ತವ್ಯವೂ ಮುಖ್ಯವಾಗಿದೆ.
ನಗರದ ಹಳೇ ಬಡಾವಣೆಯಲ್ಲಿ ಹಸು, ಎಮ್ಮೆ ಹಾಗೂ ಕುರಿಯನ್ನು ಸಾಕುವುದು ಉಂಟು. ಇದು ಅವರ ಜೀವನದ ಆಧಾರವೂ ಹೌದು. ಹೈನುಗಾರಿಕೆ ಮಾಡುವವರು ತಮ್ಮ ಮನೆ ಬಳಿಯಲ್ಲಿ ಅಥವಾ ರಸ್ತೆ ಆಸುಪಾಸು ತಿಪ್ಪೆ ಗುಂಡಿಗಳನ್ನು ನಿರ್ಮಾಣ ಮಾಡಿಕೊಂಡಿರುವುದನ್ನು ಕಾಣಬಹುದು.
ಇಂತಹ ತಿಪ್ಪೆಗುಂಡಿಗಳು ಇರುವುದರಿಂದ ಸೊಳ್ಳೆ, ನೋಣ ಮತ್ತಿತರ ಕ್ರಿಮಿಕೀಟಗಳ ಉತ್ಪಾದನೆಗೆ ಕಾರಣವಾಗಲಿದೆ. ಅಲ್ಲದೆ ಇದರಿಂದಾಗಿ ಸುತ್ತಮುತ್ತ ವಾಸಿಸುವ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಮನೆ ಮುಂದೆ ಸಗಣಿ, ಗಂಜಲ ಹಾಗೂ ಕೊಳಚೆ ನೀರು ನಿಲ್ಲುವುದರಿಂದ ಸೊಳ್ಳೆಯ ವಾಸಸ್ಥಾನವಾಗಿ, ಅದು ಕಚ್ಚುವುದರಿಂದ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ ಮುಂತಾದ ಮಾರಕ ರೋಗಗಳು ತಗುಲಿ ನಿವಾಸಿಗಳು ತೊಂದರೆ ಅನುಭವಿಸುವುದನ್ನು ಅಲ್ಲಗಳೆಯುವಂತಿಲ್ಲ.
ನಗರ ಪಾಲಿಕೆ ವ್ಯಾಪ್ತಿಯ ಹಳೇ ಬಡಾವಣೆಗಳಲ್ಲಿ ಕನ್ನೇಗೌಡನ ಕೊಪ್ಪಲು (ಕೆ.ಜಿ.ಕೊಪ್ಪಲು) ಸಹ ಒಂದು. ಮೊದಲೇ ಇಲ್ಲಿ ರಸ್ತೆಗಳು ತುಂಬಾ ಕಿರಿದು. ಈ ಮಧ್ಯೆ ಬೀದಿ ಬದಿಯಲ್ಲಿಯೇ ಹಸು, ಕರು ಕಟ್ಟಿಕೊಂಡಿರುವುದು ಹಾಗೂ ಮನೆ ಮುಂದೆ ಕಸ ಸುರಿಯುವುದನ್ನು ಕಾಣಬಹುದು. ಅಲ್ಲದೆ ಇಲ್ಲಿನ ಚಾಮರಾಜಪುರಂ ರೈಲು ನಿಲ್ದಾಣದಕ್ಕೆ ಹೊಂದಿಕೊಂಡತ್ತಿರುವ ಚಾಮುಂಡೇಶ್ವರಿ ದೇವಸ್ಥಾನ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಉದ್ದಕ್ಕೂ ಹಸುಗಳನ್ನು ಕಟ್ಟುವ ತಾಣವಾಗಿ ಮಾಡಿಕೊಂಡಿರುವುದನ್ನು ಕಾಣಬಹುದು. ಈ ರೀತಿ ಎಲ್ಲೆಂದರಲ್ಲಿ ಪಶುಗಳನ್ನು ಕಟ್ಟಿ ಹಾಕುವುದು ಹಾಗೂ ಕಸ ಹಾಕುವುದನ್ನು ನಿಯಂತ್ರಿಸುವ ಅಗತ್ಯವಿದೆ.
ಕನ್ನೇಗೌಡನಕೊಪ್ಪಲು ಹೆಸರಿನ ವಾರ್ಡ್ ಸಂಖ್ಯೆ 19ರ ವ್ಯಾಪ್ತಿಯು ಉತ್ತರಕ್ಕೆ ಹುಣಸೂರು- ಮೈಸೂರು ರಸ್ತೆಯ ಕಲಾಮಂದಿರ ರಸ್ತೆಯ ಬಿಂದುವಿನಿಂದ ಮೆಟ್ರೋಪಾಲ್ ವೃತ್ತದವರಿಗೆ, ಪೂರ್ವಕ್ಕೆ ಮೆಟ್ರೋಪಾಲ್ ಮತ್ತು ಹುಣಸೂರು ಮೈಸೂರು ರಸ್ತೆ ಸೇರುವ ಫೀಲ್‌ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಿಂದುವಿನಿಂದ ಜೆಎಲ್‌ಬಿ ರಸ್ತೆಯ ಮೂಲಕ ರಾಮಸ್ವಾಮಿ ವೃತ್ತದವರೆಗೆ. ಅಲ್ಲಿಂದ ರಾಧವಿಲಾಸ ರಸ್ತೆಯ ಮೂಲಕ ಗೀತಾ ರಸ್ತೆ ಮತ್ತು ಎಂಜಿ ರಸ್ತೆ ಸೇರುವ ಬಿಂದುವರೆಗೆ. ಕೃಷ್ಣರಾಜ ಬುಲೆವಾರ್ಡ್ ರಸ್ತೆ ಮೂಲಕ ನ್ಯೂಕಾಂತರಾಜ ಅರಸ್ ರಸ್ತೆವರೆಗೆ. ದಕ್ಷಿಣಕ್ಕೆ ಕೃಷ್ಣರಾಜ ಬುಲೆವಾರ್ಡ್ ರಸ್ತೆ ಮತ್ತು ನ್ಯೂಕಾಂತರಾಜ ಅರಸ್ ರಸ್ತೆ ಸೇರುವ ಬಿಂದುವಿದೆ. ನ್ಯೂಕಾಂತರಾಜ ಅರಸ್ ರಸ್ತೆ ಮೂಲಕ ಸರಸ್ವತಿಪುರಂ 4ನೇ ಮುಖ್ಯ ರಸ್ತೆವರೆಗೆ. ಪಶ್ಚಿಮಕ್ಕೆ ನ್ಯೂಕಾಂತರಾಜ ಅರಸ್ ರಸ್ತೆ ಮತ್ತು ಸರಸ್ವತಿಪುರಂ 4ನೇ ಮುಖ್ಯರಸ್ತೆ ಸೇರುವ ಬಿಂದುವಿನಿಂದ ಕಾಮಾಕ್ಷಿ ಆಸ್ಪತ್ರೆ ರಸ್ತೆಯವರೆಗೆ. ಅಲ್ಲಿಂದ ಕಾಮಾಕ್ಷಿ ಆಸ್ಪತ್ರೆ ರಸ್ತೆ ಮೂಲಕ ಹಳೆ ಕಾಂತರಾಜ ಅರಸ್ ರಸ್ತೆಯವರೆಗೆ. ಅಲ್ಲಿಂದ ಬೋಗಾದಿ ರಸ್ತೆ ಮೂಲಕ ಹುಣಸೂರು ಮೈಸೂರು ರಸ್ತೆಯ ಕಲಾಮಂದಿರದ ಹತ್ತಿರದ ರಸ್ತೆವರೆಗೆ ಒಳಗೊಂಡಿದೆ.
ಕನ್ನೇಗೌಡನಕೊಪ್ಪಲು ಸೇರಿದಂತೆ ಈ ಭಾಗದಲ್ಲಿ 15 ಸಾವಿರ ಜನಸಂಖ್ಯೆಯಿದ್ದು, 3 ಸಾವಿರ ಮನೆಗಳು ಹಾಗೂ 400ಕ್ಕೂ ಅಧಿಕ ಉದ್ದಿಮೆಗಳಿವೆ. ಇಲ್ಲಿನ ಬಿಜಿಎಸ್ ಅಪೊಲೋ ಆಸ್ಪತ್ರೆ ಬಳಿ ಕಸದ ತೊಟ್ಟಿ ಇರಿಸಲಾಗಿದೆ. ವಸತಿ ಹಾಗೂ ವಾಣಿಜ್ಯ ಉದ್ದಿಮೆಗಳು ಹೆಚ್ಚಾಗಿರುವ ಕಾರಣ ತ್ಯಾಜ್ಯದ ಸಂಗ್ರಹ ಅಧಿಕವಾಗಿದೆ. ಅಲ್ಲಲ್ಲಿ ಕಸದ ತಾಂಡವ ಕಾಣಬಹುದು. ಸ್ವಚ್ಛತೆ ಹಾಗೂ ಮೂಲದಲ್ಲೆ ಕಸವನ್ನು ವಿಂಗಡಿಸುವ ಬಗ್ಗೆ ಇಲ್ಲಿ ನಿವಾಸಿಗಳಿಗೆ ಅರಿವು ಮೂಡಿಸುವ ಕೆಲಸ ಹೆಚ್ಚಾಗಿ ನಡೆಯಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement