ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೈತರ ಬಂಧನ- ಬಿಡುಗಡೆ

Mainashree
Updated On : 18 Jul 2014, 10:39 am

ಮೈಸೂರು/ಎಚ್.ಡಿ. ಕೋಟೆ: ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಂದಾದ ಕಬಿನಿ ರೈತ ಹಿತರಕ್ಷಣಾ ಸಮಿತಿಯ 38 ರೈತರನ್ನು ಪೊಲೀಸರು ಶುಕ್ರವಾರ ಬಂಧಿಸಿ, ನಂತರ ಬಿಡುಗಡೆಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯವು ಗುರುವಾರ ಭರ್ತಿಯಾಗಿದೆ ಎಂದು ಜಲಾಶಯಕ್ಕೆ ಬಾಗಿನ ಅರ್ಪಿಸಲು ನೂರಾರು ರೈತರು ಶುಕ್ರವಾರ ಕಬಿನಿಗೆ ಆಗಮಿಸಿದ್ದರು. ಜಲಾಶಯ ಇನ್ನೂ ಭರ್ತಿಯಾಗಿಲ್ಲ ಎಂದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ರೈತರು ಬಾಗಿನ ಅರ್ಪಿಸಲು ಅನುಮತಿ ನೀಡಲು ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಕಬಿನಿ ಜಲಾಶಯದ ಒಳ ನುಗ್ಗಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ರೈತರನ್ನು ಬಂಧಿಸಿದರು.
ಏನಾಯಿತು?: ಕಬಿನಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಬೆಳಗ್ಗೆ 11ಕ್ಕೆ ರೈತರು ಕಬಿನಿ ಜಲಾಶಯ ಮುಖ್ಯದ್ವಾರಕ್ಕೆ ಬಳಿಗೆ ಬಂದರು. ದ್ವಾರದಲ್ಲಿದ್ದ ಹುತಾತ್ಮ ರೈತ ಗುರುಸ್ವಾಮಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಂದಾದರು.
ಈ ವೇಳೆ ಅಡ್ಡಿಪಡಿಸಿದ ಪೊಲೀಸರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ಸಹ ನಡೆಯಿತು. ಜಲಾಶಯದ ಮುಖ್ಯದ್ವಾರದ ಬಳಿ ಹುಣಸೂರು ಉಪ ವಿಭಾಗಾಧಿಕಾರಿ ಜಗದೀಶ್, ಎಚ್.ಡಿ.ಕೋಟೆ ತಹಸೀಲ್ದಾರ್ ಶಿವಸ್ವಾಮಿ, ಎಸ್‌ಎಸ್‌ಪಿ ಪ್ರದೀಪಕುಮಾರ್, ಡಾ.ಎ.ರಾಜ ಅವರು ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ನಾಗಭೂಷಣ್ ಅವರೊಂದಿಗೆ ಚರ್ಚಿಸಿದರು.
ಜಲಾಶಯದ ಸುತ್ತ ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೀಗಾಗಿ, ಯಾರೂ ಪ್ರತಿಭಟನೆ ಸಹ ಮಾಡುವಂತಿಲ್ಲ ಎಂದು ತಹಸೀಲ್ದಾರ್ ಶಿವಸ್ವಾಮಿ ರೈತರಿಗೆ ತಿಳಿಸಿದರು. ಇದರಿಂದ ಕೆರಳಿದ ರೈತರು ತಹಸೀಲ್ದಾರ್ ಅವರನ್ನು ತೀವ್ರ ತರಾಟೆ ತೆಗೆದುಕೊಂಡರು.
ಈ ವೇಳೆ ಉಂಟಾದ ಗೊಂದಲದಲ್ಲಿ 20ಕ್ಕೂ ಹೆಚ್ಚಿನ ರೈತರು ಗೇಟ್ ದಾಟಿ ಜಲಾಶಯ ಪ್ರವೇಶಿಸಿದರು. ಕೆಲವು ರೈತರು ಜಲಾಶಯಕ್ಕೆ ಬೀಳಲು ಮುಂದಾದರು. ಈ ವೇಳೆಗೆ ಮಧ್ಯಪ್ರವೇಶಿಸಿದ ಪೊಲೀಸರು, ಸೇತುವೆ ಮೇಲೆ ತೆರಳಿದ ಎಲ್ಲ ರೈತರನ್ನು ಬಂಧಿಸಿದ್ದರು.
ನಂತರ ಬಂಧಿತ ರೈತರನ್ನು ಮೈಸೂರಿನ ಡಿಎಆರ್ ಮೈದಾನಕ್ಕೆ ಕರೆತಂದರು. ಜಲಾಶಯಕ್ಕೆ ಬಾಗಿನ ಅರ್ಪಿಸಲು ಅವಕಾಶ ನೀಡದಿರುವುದಕ್ಕೆ ಹಾಗೂ ತಮ್ಮನ್ನು ಬಂಧಿಸಿರುವುದನ್ನು ಖಂಡಿಸಿ ರೈತರು ಪ್ರತಿಭಟಿಸಿದರು. ಈ ವೇಳೆ ಪೊಲೀಸ್ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಮಾತುಕತೆ ನಡೆಸಿ, ಎರಡು ದಿನಗಳ ಬಳಿಕ ಬಾಗಿನ ಅರ್ಪಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು. ನಂತರ ಬಂಧಿತ ರೈತರನ್ನು ಪೊಲೀಸರು ಬಿಡುಗಡೆಗೊಳಿಸಿದರು. ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಬನ್ನೂರು ನಾರಾಯಣ್, ಕುರುಬೂರು ಸಿದ್ದೇಶ್, ರವಿ, ಪ್ರವೀಣ್, ಲಕ್ಷ್ಮಿದೇವಿ, ಪುಷ್ಪಾ, ಪುರುಷೋತ್ತಮ್, ರಾಜಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement