ಕಬಿನಿ ಜಲಾಶಯಕ್ಕೆ ಬಾಗಿನ ಈ ಬಾರಿ ಸಿಎಂ ಸಿದ್ದರಾಮಯ್ಯ ಗೈರು
ಅಂಶಿ ಪ್ರಸನ್ನಕುಮಾರ್
ಮೈಸೂರು: ಕೇರಳದ ವಯನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಭರ್ತಿಯಾಗಿರುವ ಎಚ್.ಡಿ. ಕೋಟೆ ತಾಲೂಕು ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಬಾಗಿನ ಅರ್ಪಿಸುವುದಿಲ್ಲ. ಅವರ ಬದಲಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಜು.20 ರಂದು ಬೆಳಗ್ಗೆ 11ಕ್ಕೆ ಈ ಕಾರ್ಯ ನೆರವೇರಿಸಲಿದ್ದಾರೆ.
ಇದರೊಂದಿಗೆ ಮೂರು ವರ್ಷಗಳಿಂದ ನಿಂತು ಹೋಗಿ, ಕಳೆದ ವರ್ಷ ಮತ್ತೆ ಆರಂಭವಾಗಿದ್ದ ಕಬಿನಿಗೆ ಸಿಎಂ ಬಾಗಿನ ಅರ್ಪಿಸುವ ಸಂಪ್ರದಾಯಕ್ಕೆ ಮತ್ತೆ ಬ್ರೇಕ್ ಬಿದ್ದಿದೆ.
ಕೆಆರ್‌ಎಸ್ ಬಾಗಿನ ಹಿನ್ನೆಲೆ
ಆರ್. ಗುಂಡೂರಾವ್ ಮುಖ್ಯಮಂತ್ರಿಗಳಾಗಿದ್ದಾಗ ಕೆಆರ್‌ಎಸ್ ಜಲಾಶಯ ಭರ್ತಿಯಾದಾಗ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಸಂಪ್ರದಾಯ ಆರಂಭಿಸಿದ್ದರು. ಇದು ಅಂದಿನಿಂದಲೂ ಮುಂದುವರಿದುಕೊಂಡು ಬಂದಿದೆ. ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವ ಸಂಪ್ರದಾಯ ಇರಲಿಲ್ಲ. ಆದರೆ, 2004ರಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಅಂದಿನ ಮುಖ್ಯಮಂತ್ರಿ ಎನ್. ಧರಂಸಿಂಗ್- ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಕಬಿನಿ ಜಲಾಶಯಕ್ಕೂ ಬಾಗಿನ ಅರ್ಪಿಸುವ ಸಂಪ್ರದಾಯ ಆರಂಭಿಸಿದ್ದರು. ನಂತರ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ. ಕುಮಾರಸ್ವಾಮಿ ಇದನ್ನು ಮುಂದುವರಿಸಿದ್ದರು. ಈ ಸಂಪ್ರದಾಯವನ್ನು ಬಿಜೆಪಿ ಸರ್ಕಾರವೂ ಮುಂದುವರಿಸಿತ್ತು. ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಎರಡು ವರ್ಷ ಕೆಆರ್‌ಎಸ್‌ನಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ದಿನದಂದೇ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. ನಂತರ ಮುಖ್ಯಮಂತ್ರಿಯಾದ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿಲ್ಲ.
ಜಗದೀಶ್ ಶೆಟ್ಟರ್ ಸಂಪುಟದಲ್ಲಿ ವೈದ್ಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ. ರಾಮದಾಸ್ ಮುಖ್ಯಮಂತ್ರಿ ಬದಲು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮೂಲಕ ಹೊಸ ಸಂಪ್ರದಾಯ ಆರಂಭಿಸಿದ್ದರು. ಕಳೆದ ವರ್ಷ ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಂಪ್ರದಾಯವನ್ನು ಮತ್ತೆ ಆರಂಭಿಸಿದ್ದರು. ಆದರೆ, ಈ ಬಾರಿ ಮುಂದುವರಿಸುತ್ತಿಲ್ಲ. ಈಗ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಿ. ಶ್ರೀನಿವಾಸಪ್ರಸಾದ್ ಬಾಗಿನ ಅರ್ಪಿಸಲು ಮುಂದಾಗಿದ್ದಾರೆ.
ಸಂಕಟ ಬಂದಾಗ...
ಕಬಿನಿ ಜಲಾಶಯಕ್ಕೆ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಹಾಗೂ ವರ್ಷಕ್ಕೆ ಎರಡು ಬಾರಿ ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆ ಇದೆ. ಕೇರಳದ ವಯನಾಡು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುವುದು ಇದಕ್ಕೆ ಕಾರಣ. ಇಲ್ಲಿ ಕೇವಲ 84 ಅಡಿ ಮಾತ್ರ ನೀರು ಸಂಗ್ರಹಿಸಲು ಸಾಧ್ಯ. ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಈ ರೀತಿ ಬಿಡುಗಡೆಯಾದ ನೀರು ಮಾರ್ಗ ಮಧ್ಯೆ ಬರುವ ಮೈಸೂರು, ನಂಜನಗೂಡು, ಗುಂಡ್ಲುಪೇಟೆ, ಚಾಮರಾಜನಗರ, ಟಿ. ನರಸೀಪುರ, ಕೊಳ್ಳೇಗಾಲ, ಮದ್ದೂರಿನ ತೊರೆಕಾಡನಹಳ್ಳಿ ಬಳಿಯಿಂದ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ಬಳಕೆಯಾಗುತ್ತದೆ. ಉಳಿದ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ.
ಕೆಆರ್‌ಎಸ್ ಜಲಾಶಯ ಭರ್ತಿಯಾಗುವ ತನಕ ಅಲ್ಲಿಂದ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವುದಿಲ್ಲ. ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳು ಭರ್ತಿಯಾಗಿ, ಅಲ್ಲಿನ ಹೆಚ್ಚುವರಿ ನೀರನ್ನು ಕೆಆರ್‌ಎಸ್ ಜಲಾಶಯಕ್ಕೆ ಹರಿಸಲಾಗುತ್ತದೆ. ಹೀಗಾಗಿ ಕೆಆರ್‌ಎಸ್ ಗರಿಷ್ಠ ಮಟ್ಟ ಅಂದರೆ 124.80 ಅಡಿ ತಲುಪುವ ತನಕ ಕಾವೇರಿ ನ್ಯಾಯಾಧೀಕರಣದ ತೀರ್ಪಿನಂತೆ ತಮಿಳುನಾಡಿಗೆ ನೀರು ಪೂರೈಸುವುದು ಕಬಿನಿ ಜಲಾಶಯ. ಈ ಮಹತ್ವವನ್ನು ಅರಿತು ಧರಂಸಿಂಗ್ ಕಬಿನಿಗೂ ಬಾಗಿನ ಅರ್ಪಿಸುವ ಸಂಪ್ರದಾಯ ಆರಂಭಿಸಿದ್ದರು.
ಆದರೆ, ಕಬಿನಿ ಜಲಾಶಯವನ್ನು ತಮಿಳುನಾಡಿಗೆ ನೀರು ಪೂರೈಸುವ ತೊಟ್ಟಿಯಂತೆ ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಕೆಆರ್‌ಎಸ್ ಬೃಂದಾವನ ಮಾದರಿಯಲ್ಲಿ ಅದನ್ನು ಅಭಿವೃದ್ಧಿಪಡಿಸುವ ಸರ್ಕಾರದ ಘೋಷಣೆ ಪೊಳ್ಳು ಭರವಸೆಯಾಗಿಯೇ ಉಳಿದಿದೆ. ಇವತ್ತಿಗೂ ಅದು ಈಡೇರಿಲ್ಲ. ಬಾಗಿನ ಅರ್ಪಿಸಲು ಬಂದಾಗ ಈ ಮಾತನ್ನು ಹೇಳುವವರು ಮತ್ತೆ ಮುಂದಿನ ವರ್ಷದ ತನಕ ಈ ವಿಷಯವನ್ನು ಮರೆಯುತ್ತಾರೆ.