ವರುಣದಲ್ಲಿ ಸುರಿದ ಸಾಹಿತ್ಯ ಮಳೆ
ಜೆ. ಮಹದೇವ
ವರುಣ: ಸರ್ಕಾರಿ ಶಾಲೆಯೊಂದರ ಆವರಣದಲ್ಲಿ ಸಾಹಿತ್ಯದ ಸುರಿಮಳೆ ಗೈಯುತ್ತಿದ್ದರೆ, ಅದೇ ಸಂದರ್ಭದಲ್ಲಿ ವರುಣ ರಾಯನ ಹನಿಯ ಸಿಂಚನ ಅಕ್ಷರದೀವಿಗೆಗೆ ಎರಕ ಹೊಯ್ದಿತ್ತು. ಏನು ಆಶ್ಚರ್ಯ ಅದೂ ವರುಣನೂರಿನಲ್ಲಿ!
ಮೈಸೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನ ವರುಣ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನವು ಕೆಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ರಾಜ್ಯದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿಯ ತವರು ಕ್ಷೇತ್ರ ವರುಣ ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನ ನಡೆದದ್ದು ಇದೇ ಮೊದಲು. ಅದಕ್ಕಾಗಿ ಸಕಲ ಸಿದ್ಧತೆಯೊಂದಿಗೆ ಕಸಪಾ ನಡೆಸಿದ ಸಮ್ಮೇಳನ ಯಾವುದೇ ಅಡೆತಡೆ ಇಲ್ಲದೆ ಸುಸೂತ್ರವಾಗಿ ನಡೆಯಿತು.
ವರುಣ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ನಿರ್ಮಿಸಿದ್ದ ಶ್ರೀ ಘನಲಿಂಗ ಶಿವಯೋಗಿ ಸಭಾ ಮಂಟಪದ ಮುಂಭಾಗ ತಹಸೀಲ್ದಾರ್ ನವೀನ್ ಜೋಸೆಫ್ ಧ್ವಜಾರೋಹಣ, ಗ್ರಾಪಂ ಅಧ್ಯಕ್ಷ ಡಿ.ಪಿ. ಶ್ರೀಧರ್ ನಾಡಧ್ವಜ ಹಾಗೂ ತಾಲೂಕ ಕಸಾಪ ಅಧ್ಯಕ್ಷ ಎಸ್. ಶಿವಮೂರ್ತಿ ಕಾನ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಈ ಬಾರಿ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಮಾನಸ ಅವರನ್ನು ಪುಷ್ಪಗಳಿಂದ ಅಲಕೃತಗೊಂಡ ತೆರೆದ ವಾಹನದಲ್ಲಿ ಚಿಕ್ಕಳ್ಳಿ ಗ್ರಾಮದಿಂದ ವರುಣಾದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ದಾರಿಯುದ್ದಕ್ಕೂ ನಂದಿಧ್ವಜ, ನಾದಸ್ವರ, ಗೊರವ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ಹಲವಾರು ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ನೂರ ಒಂದು ಪೂರ್ಣಕಳಸಗಳನ್ನು ಹೊತ್ತು ತಂದ ಮಹಿಳೆಯರಿಗೆ ಭವ್ಯ ಸ್ವಾಗತ ದೊರೆಯಿತು.
ಗಮನ ಸೆಳೆದ ಮಹಿಳೆಯರು: ವರುಣ ಗ್ರಾಮದ ನಾನಾ ಮಹಿಳಾ ಸಂಘದಲ್ಲಿ ಸಕ್ರಿಯರಾಗಿರುವ ಮಹಿಳಾ ಸದಸ್ಯರು ಸಾಹಿತ್ಯ ಸಮ್ಮೇಳನದ ಪ್ರಯುಕ್ತ ವಿಶೇಷ ವೇಷ ಧರಿಸಿ ತಾವು ಯಾರಿಗೂ ಕಮ್ಮಿ ಇಲ್ಲ ಎಂಬ ಸಂದೇಶ ನೀಡಿದರು. ರಾಜ ಮಹಾರಾಜರು, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಟಿಪ್ಪು ಸುಲ್ತಾನ್ ವೇಷ ಧರಿಸಿ ಗಮನ ಸೆಳೆದರು.
ಸಂಸ್ಕೃತಿ- ಪ್ರಗತಿ ನಾಣ್ಯದ 2 ಮುಖ: ಸೋಮಶೇಖರ್
ಶ್ರೀ ಜಯಚಾಮರಾಜೇಂದ್ರ ಒಡೆಯರ್ ವೇದಿಕೆ (ವರುಣ): ಸಂಸ್ಕತಿ ಮತ್ತು ಪ್ರಗತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂಸ್ಕೃತಿ ಬೆಳವಣಿಗೆ ಇಲ್ಲದಿದ್ದರೆ ಪ್ರಗತಿ ಕಾಣಲು, ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ್ ಅಭಿಪ್ರಾಯಪಟ್ಟರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವರುಣ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಸಂಸ್ಕೃತಿ- ಪ್ರಗತಿ ಈ ಎರಡನ್ನು ಜತೆ ಜತೆಯಾಗಿ ಕೊಂಡೊಯ್ಯಬೇಕು. ಇದೇ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ, ಕನ್ನಡ ಕಾವಲು ಸಮಿತಿಯಲ್ಲಿದ್ದಾಗ ಸ್ಮರಣೀಯ ಕೆಲಸಗಳನ್ನು ಮಾಡಿದ್ದಾರೆ. ಅದೇ ರೀತಿ ತಮ್ಮ ಅವಧಿಯಲ್ಲೇ ತಾಲೂಕು ಸಮ್ಮೇಳನಕ್ಕೆ ಕನಿಷ್ಠ ರು. 5 ಲಕ್ಷ ಹಾಗೂ ಜಿಲ್ಲಾ ಸಮ್ಮೇಳನಕ್ಕೆ ರು. 10 ಲಕ್ಷ ಅನುದಾನ ನೀಡಬೇಕು. ಕನ್ನಡವನ್ನು ಮನದ, ಮನೆಯ ಭಾಷೆಯನ್ನಾಗಿ ಮಾಡಬೇಕು. ನಮ್ಮ ಭಾಷೆಗೆ ತಕ್ಕಂತ ಗಟ್ಟಿತನವನ್ನು ಒದಗಿಸಿ ಜಾಗತಿಕ ಮಟ್ಟದಲ್ಲಿ ಸಂಪನ್ನಗೊಳಿಸಬೇಕು. ಹೊರ ನಾಡಿನಿಂದ ಬರುವ ಕನ್ನಡಿಗರಿಗೆ, ಗಡಿನಾಡ ಕನ್ನಡಿಗರಿಗೆ ಆಶ್ರಯ ನೀಡಬೇಕು ಎಂದು ಅವರು ಒತ್ತಾಯಿಸಿದರು. ದೇವಾಂಬುದಿ ಸ್ಮರಣ ಸಂಚಿಕೆಯನ್ನು ಮಾಜಿ ಸಂಸದ ಎಚ್. ವಿಶ್ವನಾಥ್ ಬಿಡುಗಡೆ ಮಾಡಿದರು.