ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಬಿನಿಗೆ ಸಚಿವರಿಂದ ಬಾಗಿನ

Vishwanath S
Updated On : 21 Jul 2014, 12:49 pm

ಎಚ್.ಡಿ. ಕೋಟೆ: ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಪ್ರಸಾದ್ ಭಾನುವಾರ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಕಬಿನಿ ಜಲಾಶಯದ ಮುಂಭಾಗ ಇರುವ 52 ಎಕರೆ ಪ್ರದೇಶದಲ್ಲಿ ಕೆಆರ್‌ಎಸ್ ಉದ್ಯಾನದ ಮಾದರಿಯಲ್ಲೇ ಇಲ್ಲೂ ಉದ್ಯಾನ ನಿರ್ಮಿಸುವ ಯೋಜನೆಯನ್ನು ಸರ್ಕಾರ ಹೊಂದಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಜಿಲ್ಲೆಯವರೇ ಆಗಿರುವುದರಿಂದ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ಕೊಡುವ ದೃಷ್ಟಿಯಿಂದ ಅನುದಾನಕ್ಕೆ ತೊಂದರೆ ಆಗುವುದಿಲ್ಲ. ಈ ಕೂಡಲೆ ಕ್ರಮ ವಹಿಸಲಾಗುವುದು ಎಂದರು.
ರಾಜ್ಯದಲ್ಲಿ ಬೇಗನೆ ಭರ್ತಿಯಾಗುವ ಜಲಾಶಯ ಕಬಿನಿ ಆಗಿದೆ. ಕಳೆದ 52 ವರ್ಷಗಳಲ್ಲಿ ಜೂನ್ ತಿಂಗಳಲ್ಲಿ ಮುಂಗಾರು ವಿಫಲವಾಗಿರುವುದು ಇದೇ ಮೊದಲ ಬಾರಿ. ಆದರೂ ಜುಲೈ ಮಧ್ಯಭಾಗದಲ್ಲಿ ಜಲಾಶಯ ತುಂಬಿದೆ. ಕಬಿನಿ ಅಚ್ಚುಕಟ್ಟು ರೈತರಿಗೆ ಯಾವುದೇ ತೊಂದರೆಯಾಗದಂತೆ ನೀರನ್ನು ನಿಗದಿತ ಅವಧಿಯಲ್ಲಿ ಹರಿಸಲಾಗುವುದು. ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಸಲಹಾ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದರು.
ಕಳೆದ ಮೂರು ದಿನಗಳ ಹಿಂದೆ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದ ರೈತರಿಗೆ ಅವಕಾಶ ಕೊಡದೇ, ಅವರನ್ನು ಬಂಧಿಸಿ ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಂಪ್ರದಾಯದಂತೆ ರಾಜ್ಯದಲ್ಲಿ ಜಲಾಶಯ ತುಂಬಿದಾಗ ಮೊದಲಿಗೆ ಸರ್ಕಾರದ ಸಚಿವರು ಅಥವಾ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವುದು ಸಂಪ್ರದಾಯ. ಇದನ್ನು ಈ ಬಾರಿ ಪಾಲಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಮುಖ್ಯಮಂತ್ರಿಗಳು ಜಲಾಶಯಕ್ಕೆ ಬಾಗಿನ ಅರ್ಪಿಸಬೇಕಿತ್ತು. ಆದರೆ ಅಧಿವೇಶನ ಮತ್ತು ಕೆಲಸ ಕಾರ್ಯಗಳ ಒತ್ತಡದಿಂದ ಅವರು ಬರಲಾಗಲಿಲ್ಲ ಎಂದರು.
ಶಾಸಕ ಎಸ್. ಚಿಕ್ಕಮಾದು, ತಾಪಂ ಅಧ್ಯಕ್ಷ ಮಲ್ಲೇಶ್ವರಿ, ಉಪಾಧ್ಯಕ್ಷ ಬಾಲಚಂದ್ರ, ಸದಸ್ಯರಾದ ಬಿ.ಜಿ. ಮಹೇಂದ್ರ, ರವಿಕುಮಾರ್, ಮುಖಂಡರಾದ ಯೋಗನರಸಿಂಹೇಗೌಡ, ಡಿ. ಸುರೇಂದ್ರ, ಟಿ. ವೆಂಕಟೇಶ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಮುಖ್ಯ ಎಂಜಿನಿಯರ್ ಶಿವಶಂಕರ್, ಅಧೀಕ್ಷಕ ಎಂಜಿನಿಯರ್ ಶಿವಸ್ವಾಮಿ, ಕಾರ್ಯಪಾಲಕ ಎಂಜಿನಿಯರುಗಳಾದ ನಾಗಭೂಷಣ್, ಮರಿಸ್ವಾಮಿ, ಮಂಜುನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರುಗಳಾದ ರಘುಪತಿ, ಅಚ್ಯುತ್ ಇದ್ದರು.
ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ
ಎಚ್.ಡಿ. ಕೋಟೆ: ತಾಲೂಕಿನ ಕಬಿನಿ ಜಲಾಶಯದ ದ್ವಾರದಲ್ಲಿ ಜಲಾಶಯಕ್ಕೆ ರೈತರು ಬಾಗಿನ ಬಿಡಲು ಅವಕಾಶ ನೀಡದ ಸರ್ಕಾರದ ಕ್ರಮ ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಲಾಶಯಕ್ಕೆ ಬಾಗಿನ ಬಿಡುವ ವಿಷಯ ತಿಳಿದ ರೈತರು, ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ದ ಘೋಷಣೆ ಕೂಗಿದರು. ಆದರೆ ಉಸ್ತುವಾರಿ ಸಚಿವರು, ಬಾಗಿನ ಬಿಡಲಿಕ್ಕೆ ಹೋಗುವ ಸಂದರ್ಭದಲ್ಲಾಗಲಿ ಅಥವಾ ಬಾಗಿನ ಅರ್ಪಿಸಿ, ಪುನರಾಗಮಿಸುವಾಗ ರೈತರನ್ನು ಮಾತನಾಡಿಸಲಿಲ್ಲ.
ಆದರೆ ಶಾಸಕ ಚಿಕ್ಕಮಾದು ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಈ ಬಾರಿ ಸಂಪ್ರದಾಯದಂತೆ ಸರ್ಕಾರದ ವತಿಯಿಂದ ಬಾಗಿನ ಅರ್ಪಿಸಲಾಗಿದೆ. ಈಗ ನೀವು ಕೂಡ ಜಲಾಶಯಕ್ಕೆ ಬಾಗಿನ ಅರ್ಪಿಸಬಹುದು ಎಂದು ರೈತರ ಮನವೊಲಿಕೆಗೆ ಪ್ರಯತ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುರುಬೂರು ಶಾಂತಕುಮಾರ್, ಕಬಿನಿಗೆ ಬಾಗಿನ ಅರ್ಪಿಸಲು ಸಂಪ್ರದಾಯ ಪ್ರಾರಂಭ ಮಾಡಿದ್ದು ರೈತ ಸಂಘಟನೆಗಳು. ಅದೂ ಕಬಿನಿ ಜಲಾಶಯದಲ್ಲಿ ಗುರುಸ್ವಾಮಿ ಹುತಾತ್ಮರಾದಾಗ. ಆ ಸಂಪ್ರದಾಯವನ್ನು ಪ್ರತಿ ವರ್ಷ ರೈತರು ನಡೆಸಿಕೊಂಡು ಬರುತ್ತಿದ್ದಾರೆ. ಈಗ ರೈತರಿಗೆ ಬಾಗಿನ ಬಿಡಲು ಅವಕಾಶ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement