ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ: ಪ್ರತಾಪ್ ಸಿಂಹ
ಟಿ. ನರಸೀಪುರ: ಕಾರ್ಯಕರ್ತರು ಸಂಘಟಿತರಾಗಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಮುಂದಾಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರದ ಕಾರ್ಯ ಗ್ರಾಮದಲ್ಲಿ ಭಾನುವಾರ ನಡೆದ ಮೈಸೂರು ಜಿಲ್ಲಾ ಬಿಜೆಪಿಯ ಪರಿಚಯ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಜೆಟ್ನಲ್ಲಿ ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗಾಗಿ ಗ್ರಾಮ ಸಡಕ್ ಯೋಜನೆ ಮಂಜೂರು ಮಾಡಿರುವ 14 ಸಾವಿರ ಕೋಟಿ ಅನುದಾನ ಅನುಷ್ಠಾನಕ್ಕೆ ತರಲು ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಅತ್ಯಾಚಾರ ಹಾಗೂ ಹತ್ಯೆಯ ಹಿನ್ನೆಲೆ ಹೊಂದಿದೆ. ರಾಜ್ಯದಲ್ಲಿ ಹದಿನೈದು ದಿನಗಳಿಂದ ನಡೆಯುತ್ತಿರುವ ಸರಣಿ ಅತ್ಯಾಚಾರ ಪ್ರಕರಣಗಳ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಮತ್ತು ಸಚಿವರು ದುರಹಂಕಾರದಿಂದ ವರ್ತಿಸಿದ್ದಾರೆ. ಇದನ್ನೆ ಹಳ್ಳಿಗಳಲ್ಲಿ ಮುಕ್ತವಾಗಿ ಚರ್ಚಿಸಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಚಾಟಿ ಬೀಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಸಂಘಟನೆ ಹೋರಾಟದ ಪ್ರತಿಫಲ ಮೈಸೂರು ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಗೆಲುವು ಸಾಧ್ಯವಾಯಿತು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ಗೌಡ ಪರಿಚಯ ವರ್ಗ ಕಾರ್ಯಾಗಾರದ ಉದ್ದೇಶ ತಿಳಿಸಿಕೊಟ್ಟರು. ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಇ. ಮಾರುತಿರಾವ್ ಪವಾರ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಸಿದ್ದರಾಜು, ಮಾಜಿ ಉಪಾಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ, ಮೈಸೂರು ತಾಪಂ ಉಪಾಧ್ಯಕ್ಷೆ ಲೋಕಮಣಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದವೀರಪ್ಪ, ತಾಪಂ ಸದಸ್ಯ ಡಿ. ಕೃಷ್ಣಮೂರ್ತಿ, ಬಿಜೆಪಿ ವರುಣ ಕ್ಷೇತ್ರಾಧ್ಯಕ್ಷ ಶಿವನಂಜಪ್ಪ, ಪ್ರಧಾನ ಕಾರ್ಯದರ್ಶಿ ಎಂ. ವೆಂಕಟರಮಣಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಡಾ. ಶಿವರಾಮ, ಹಿಂದುಳಿದ ವರ್ಗಗಳ ಕಾರ್ಯದರ್ಶಿ ಪಾಪಣ್ಣ, ಮುಖಂಡರಾದ ಬಸವರಾಜು, ಮಹದೇವಯ್ಯ, ಕೆ.ಎಸ್. ಬಸವರಾಜು ಇದ್ದರು.