ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅತ್ಯಾಚಾರ, ದೌರ್ಜನ್ಯ ತಡೆಗೆ ಎಲ್ಲರ ಸಹಕಾರ ಅಗತ್ಯ: ಮಂಜುಳಾ ಮಾನಸ

Vishwanath S
Updated On : 22 Jul 2014, 12:48 pm

ಮೈಸೂರು: ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅಧಿಕಾರಿಗಳಿಗೆ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಹಲವು ಕಡೆಗಳಲ್ಲಿ ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು. ಇತ್ತೀಚೆಗೆ ಮೈಸೂರು ಜಿಲ್ಲೆಯಲ್ಲಿ 2 ಅತ್ಯಾಚಾರ ಪ್ರಕರಣಗಳು ನಡೆದಿರುವುದು ಆತಂಕ ಹುಟ್ಟಿಸಿದೆ. ಇದು ಮುಖ್ಯಮಂತ್ರಿಗಳ ಹಾಗೂ ನನ್ನ ತವರು ಜಿಲ್ಲೆ ಆಗಿರುವುದರಿಂದ ಇಂತಹ ಪ್ರಕರಣಗಳು ಮುಜುಗರ ಉಂಟುಮಾಡಿವೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳು ಕಠಿಣ ಕ್ರಮ ವಹಿಸಬೇಕು ಎಂದರು.
ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಸರ್ಕಾರ ಹಾಗೂ ಆಯೋಗದಿಂದ ಮಾತ್ರವೇ ಸಾಧ್ಯವಿಲ್ಲ. ಸ್ವಯಂಸೇವಾ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಮಾಧ್ಯಮದವರು ಕೈಜೋಡಿಸಿದಾಗ ಬದಲಾವಣೆ ಸಾಧ್ಯ. ಶಾಲೆ ಹಂತದಲ್ಲಿಯೇ ಈ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿಯೂ ಜೀವನ ಮೌಲ್ಯ ಕುರಿತಾಗಿ ತರಗತಿ ನಡೆಸುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಬೇಕು. ಬೆಂಗಳೂರು ಮಾದರಿಯಲ್ಲಿ ಶಾಲೆಗಳಿಗೆ ಸಿಸಿಟಿವಿ ಅಳವಡಿಸಬೇಕು ಎಂದು ಅವರು ತಿಳಿಸಿದರು.  
ಚಕಮಕಿ: ಈ ಸಂದರ್ಭದಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಮಹಿಳಾ ಪರ ಸಂಘಟನೆಗಳ ಮುಖಂಡರು ಮಾತನಾಡಿ,  ದೂರು ಕೊಡಲು ಠಾಣೆಗಳಿಗೆ ಹೋದರೆ ಪೊಲೀಸರು ನಡೆದುಕೊಳ್ಳುವ ರೀತಿ, ಪ್ರಯೋಗಿಸುವ ಪದಗಳು ಮುಂತಾದ ನಡವಳಿಕೆಗಳ ಬಗ್ಗೆ ದೂರಿದರು ಹಾಗೂ  ಪೊಲೀಸ್ ವ್ಯವಸ್ಥೆ ವಿರುದ್ಧ ಹರಿಹಾಯ್ದರು. ಈ ವೇಳೆ ಎಸಿಪಿ ಕವಿತಾ ಹಾಗೂ ಒಡನಾಡಿಯ ಸ್ಟ್ಯಾನ್ಲಿ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ ಪರಿಸ್ಥಿತಿ ತಿಳಿಗೊಳಿಸಿದರು.  
ಸಭೆಯಲ್ಲಿ ಸಾರ್ವಜನಿಕರು ಹಾಗೂ ಇಲಾಖೆಗಳ ಅಧಿಕಾರಿಗಳು ತಮ್ಮ ಸಲಹೆ ಸೂಚನೆ ನೀಡಿದರು. ಮಾಹಿತಿ ಕ್ರೂಢೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ಎಸ್. ಪಾಲಯ್ಯ, ಜಿ.ಪಂ. ಸಿಇಒ ಪಿ.ಎ. ಗೋಪಾಲ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ  ಎನ್.ಆರ್. ವಿಜಯ್, ಡಾ. ಎಚ್.ಟಿ ಪುಟ್ಟಸ್ವಾಮಿ, ಪದ್ಮಾ, ಎಚ್.ಆರ್. ಬಸಪ್ಪ, ನಾಗರಾಜು, ಎಸಿಪಿ ಕವಿತಾ, ಕೆ.ಸಿ. ದಿವ್ಯಶ್ರೀ, ಕೆ.ಆರ್.ಆಸ್ಪತ್ರೆ ಆಧೀಕ್ಷಕ ಮುಂತಾದವರು ಭಾಗವಹಿಸಿದ್ದರು.
ಪೊಲೀಸ್ ಠಾಣೆಗಳಿಗೆ  ಸಿಸಿಟಿವಿ
ಮಹಿಳೆಯರು ಹಾಗೂ ಸಾರ್ವಜನಿಕರು ದೂರು ನೀಡಲು ಭಯ ಪಡುವಂತಹ ಸನ್ನಿವೇಶ ಎದುರಾಗಿದ್ದು, ಉತ್ತಮ ವಾತಾವರಣ ಮೂಡಿಸಬೇಕಾದರೆ ಎಲ್ಲ ಠಾಣೆಗಳಿಗೂ ಸಿಸಿಟಿವಿ ಅಳವಡಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಸಲಹೆ ನೀಡಿದರು.   ಮಾನಕ್ಕೆ, ಪ್ರಾಣಕ್ಕೆ ಹಾನಿಯಾದಾಗ ದೂರು ಕೊಡಲು ಪೊಲೀಸ್ ಠಾಣೆಗಳಿಗೆ ಹೋಗಲು ಜನರು ಹೆದರುತ್ತಾರೆ. ಪೊಲೀಸರಿಂದಲೂ ಸಹ ಕಾನೂನು ದುರುಪಯೋಗವಾಗುತ್ತಿದೆ. ಅಮಾಯಕರು ಬಲಿಯಾಗುತ್ತಿದ್ದಾರೆ. ಕುಟುಂಬ ಸಮಾಜದ ಒಂದು ಭಾಗ. ಅಧಿಕಾರದ ದರ್ಪ ಹಾಗೂ ದೌಲತ್ತುಗಳನ್ನು ಬದಿಗಿಟ್ಟು ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ವರ್ತಿಸಬೇಕು ಎಂದರು. ಮಹಿಳೆಯರ ರಕ್ಷಣೆಗಾಗಿ ಸ್ಥಾಪಿತವಾಗಿರುವ ಮಹಿಳಾ ಠಾಣೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ದೂರು ಕೊಡಲು ಬರುವ ಮಹಿಳೆಯರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂಬ ಬಗ್ಗೆ ಅನೇಕ ದೂರುಗಳು ಕೇಳಿಬಂದಿವೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳಬೇಕು ಎಂದು ಅವರು ತಿಳಿಸಿದರು.  
ದೌರ್ಜನ್ಯ ಪ್ರಕರಣಗಳಿಗೆ ಒಳಗಾದ ಮಹಿಳೆಯರಿಗೆ ಇಲ್ಲಿನ ಶಕ್ತಧಾಮ ಹಾಗೂ ಒಡನಾಡಿ ಸಂಸ್ಥೆಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಆದರೆ ಆ ಸಂಸ್ಥೆಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಸಾಂತ್ವನ ಕೇಂದ್ರಗಳಿಗೆ ಸಮಾಲೋಚಕರು ಹಾಗೂ ಸಾಮಾಜಿಕ ಕಾರ್ಯಕರ್ತರ ಕೊರತೆ ತುಂಬಬೇಕು.
ಟಿ ಎನ್.ಆರ್. ವಿಜಯ್, ಉಪನಿರ್ದೇಶಕ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  
ಠಾಣೆಗಳಿಗೆ ಹೋದಾಗ ಸಾಂತ್ವನ ಕೇಂದ್ರದ ಸಮಾಲೋಚಕಿಯರೊಂದಿಗೆ ಪೊಲೀಸರು ಸರಿಯಾಗಿ ವರ್ತಿಸುವುದಿಲ್ಲ. ದೂರು ಕೊಡಲು ಹೋಗುವ ಮಹಿಳೆಯರನ್ನು ಏಕವಚನದಿಂದ ಮಾತನಾಡಿಸುವುದು ಹಾಗೂ ಅಸಭ್ಯವಾಗಿ ವರ್ತಿಸುವುದು ನೋವಿನ ಸಂಗತಿ. ಇದರ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು.  
ಟಿ ರತ್ನಮ್ಮ, ಸಮಾಲೋಚಕಿ
ನರಸಿಂಹರಾಜ ಮೊಹಲ್ಲಾದ ವ್ಯಾಪ್ತಿಯಲ್ಲಿ ದಿನಕ್ಕೆ 40-50 ದೌರ್ಜನ್ಯ ಪ್ರಕರಣಗಳು ನಡೆಯುತ್ತವೆ. ಆದರೆ ಮಹಿಳೆಯರಿಗೆ ಇರುವ ಸಾಂತ್ವನ ಕೇಂದ್ರಗಳ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಅರಿವು ಮೂಡಿಸಿಲು ವಾರ್ಡ್‌ಗಳ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ  ನಡೆಸಬೇಕು.
ಟಿ ಕೆ.ಸಿ. ಶೌಕತ್ ಪಾಷ, ನಗರ ಪಾಲಿಕೆ ಸದಸ್ಯ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement