ಅತ್ಯಾಚಾರ ಪ್ರಕರಣ ಬಿಜೆಪಿ ಪ್ರತಿಭಟನೆ
ಮೈಸೂರು: ರಾಜ್ಯದ್ಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಹತ್ತಿಕ್ಕುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ, ಎಬಿವಿಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ನ್ಯಾಯಾಲಯ ಎದುರಿನ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು, ಗೃಹ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ನಿರ್ಮಾಣಕ್ಕೆ ಕಾರಣವಾಗಿರುವ ಕೆ.ಜೆ. ಜಾರ್ಜ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.
ಬಿಜೆಪಿ ನಗರಾಧ್ಯಕ್ಷ ಇ. ಮಾರುತಿರಾವ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಅಧಿಕವಾಗುತ್ತಿದ್ದು, ರಾಜ್ಯ ತಲ್ಲಣಗೊಂಡಿದೆ. ಇಷ್ಟೆಲ್ಲಕ್ಕೂ ಸಚಿವ ಕೆ.ಜೆ. ಜಾರ್ಜ್ ಅವರ ಅಸಮರ್ಥತೆಯೇ ಕಾರಣ. ಪಕ್ಷಪಾತಿ ಧೋರಣೆಯನ್ನೇ ತನ್ನ ಆಡಳಿತದಲ್ಲಿ ಅಳವಡಿಸಿಕೊಂಡ ಸಚಿವರು ಪೊಲೀಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹಾಡಹಗಲೆ ಕೊಲೆ ಮಾಡಿ ಆರೋಪಿಗಳು ನಿರ್ಭಯವಾಗಿ ಓಡಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಶಾಸಕರು, ಮುಖಂಡರ ಪುತ್ರರು, ಸಂಬಂಧಿಕರು, ಅಪರಾಧ ಪ್ರಕರಣಗಳಲ್ಲಿ ಸಿಲುಕಿದ್ದರೂ ನಿಷ್ಪಕ್ಷಪಾತ ತನಿಖೆ ನಡೆಸಿ, ಶಿಕ್ಷಿಸುವುದಕ್ಕೆ ಅಗತ್ಯವಾದ ನೈತಿಕ ಸ್ಥೈರ್ಯವನ್ನು ಪೊಲೀಸರಿಗೆ ತುಂಬುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದಲೂ ಪಕ್ಷಪಾತಿ ನಿಲವು ತಳೆದು ಒಂದು ಕೋಮಿನ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿಕೊಳ್ಳುತ್ತಿರುವುದು ಇವರ ಕಾಲದಲ್ಲಿ ನಿತ್ಯದ ನಿಲುವಾಗಿದೆ. ವಿನಾಕಾರಣ ಬಹುಸಂಖ್ಯಾತ ಕೋಮಿನ ಅನೇಕರ ಮೇಲೆ ರೌಡಿ ಶೀಟ್ಗಳನ್ನು ತೆರೆದು ಪೊಲೀಸ್ ದೌರ್ಜನ್ಯವೆಸಗುತ್ತಿರುವುದಕ್ಕೆ ಇವರ ಕುಮ್ಮಕ್ಕೆ ಕಾರಣ ಎಂಬುದೂ ಸ್ಪಷ್ಟವಾಗಿದೆ. ಹಾಗಾಗಿ ಇದಕ್ಕೆ ಕಾರಣರಾದ ಸಚಿವರು ತಕ್ಷಣ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಬಿ.ಪಿ. ಮಂಜುನಾಥ್. ಮ.ವಿ. ರಾಮಪ್ರಸಾದ್, ಎಂ. ಶಿವಕುಮಾರ್, ಜಯಪ್ರಕಾಶ್, ಜೋಗಿ ಮಂಜು, ಮಲ್ಲಪ್ಪಗೌಡ, ವಿ. ಸೋಮಸುಂದರ್ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೆಪಿಎಂಪಿಕೆಯಿಂದ ಅರಿವು ಕಾರ್ಯಕ್ರಮ
ಮೈಸೂರು: ಕಾಮಾತುರಾಣಾಂ ನ ಭಯಂ ನ ಲಜ್ಜಾ ಎಂಬ ಹಳೇ ಸಂಸ್ಕೃತ ಗಾದೆಯನ್ನು ನಾವಿಂದು ನೆನಪಿನಲ್ಲಿಟ್ಟುಕೊಳ್ಳಬೇಕು. ಕಾಮುಕರಿಗೆ ಎಂದೂ ನಾಚಿಕೆಯಾಗಲಿ, ಭಯವಾಗಲಿ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಎಚ್ಚೆತ್ತು ಅತ್ಯಾಚಾರಕ್ಕೆ ಬಲಿಯಾಗುವ ಸಂತ್ರಸ್ತರ ನೆರವಿಗೆ ಧಾವಿಸಬೇಕು. ಇಂತಹ ಪ್ರಕರಣಗಳನ್ನು ತಡೆಗಟ್ಟಬೇಕು ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಕರೆ ನೀಡಿದೆ.
ನಗರದ ಜಗನ್ಮೋಹನ ಅರಮನೆ ಬಳಿ ನಡೆದ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿಗಳ ತವರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮಗಳು ಹಾಗೂ ಸಂಘ- ಸಂಸ್ಥೆಗಳು ಹೆಚ್ಚು ಕ್ರಿಯಾಶೀಲವಾದ ಹಿನ್ನೆಲೆಯಲ್ಲಿ ಮುಚ್ಚು ಹೋಗುತ್ತಿದ್ದ ಪ್ರಕರಣಗಳು ಹೊರ ಬರುತ್ತಿವೆ. ಹೆಣ್ಣಿನ ಮೇಲೆ ನಡೆಯುತ್ತಿರುವ ಇಂತಹ ಅಮಾನವೀಯ ದೌರ್ಜನ್ಯವನ್ನು ತಡೆಗಟ್ಟುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಜತೆಗೆ ಸಾರ್ವಜನಿಕರು ಸರ್ಕಾರದೊಂದಿಗೆ ಸಹಕರಿಸಿ ಒಗ್ಗಟ್ಟಿನಿಂದ ಇಂತಹ ಪ್ರಕರಣಗಳನ್ನು ತಡೆಗಟ್ಟಬೇಕಿದೆ ಎಂದು ಪದಾಧಿಕಾರಿಗಳು ಮನವಿ ಮಾಡಲಾಯಿತು.
ಟ್ರಸ್ಟ್ ಅಧ್ಯಕ್ಷ ವಿಕ್ರಂ, ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಪದಾಧಿಕಾರಿಗಳಾದ ಕುಮಾರ್ಗೌಡ, ರಾಕೇಶ್ ಭಟ್, ಅಜಯ್ಶಾಸ್ತ್ರಿ, ಎಸ್.ಎನ್. ರಾಜೇಶ್, ಗುರುಮೂರ್ತಿ, ಗುರುರಾಜ್ ಶೆಣೈ, ಚಂದ್ರು, ದುರ್ಗಾಪ್ರಸಾದ್, ಸಂಪತ್, ಚಂದ್ರು, ದೀಪು ಇದ್ದರು.